ದಾವಣಗೆರೆ: ನಗರದ ಕೆ.ಟಿ.ಜೆ.ನಗರ ಪೊಲೀಸರು ಕೇವಲ 72 ಗಂಟೆಗಳ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಫೆಬ್ರವರಿ 17ರಂದು ಅಜ್ಜರ್ ಆಲಿ ಎಂಬುವವರು ಮಗನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದ ಸಮಯದಲ್ಲಿ, ಅವರ ಮನೆಯ ಬೀಗ ಮುರಿದು ಕಳ್ಳತನ ನಡೆದಿತ್ತು. ಈ ಕುರಿತು ದಾಖಲಾದ ದೂರಿನ ಬೆನ್ನಲ್ಲೇ ಎಸ್ಪಿ ಶೇಖರ್ ಹೆಚ್.ಟಿ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಶಿವಮೊಗ್ಗ ಮೂಲದ ಆಟೋ ಚಾಲಕ ಗೌತಮ್ ರಾಜ್ (35) ಎಂಬಾತನನ್ನು ಬಂಧಿಸಿದ ಪೊಲೀಸರು, ಆತನಿಂದ ಈ ಕೆಳಗಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
ಸುಮಾರು 29.29 ಲಕ್ಷ ರೂ. ಮೌಲ್ಯದ 261 ಗ್ರಾಂ ಚಿನ್ನಾಭರಣ. 65,000 ರೂ. ಮೌಲ್ಯದ 439 ಗ್ರಾಂ ಬೆಳ್ಳಿ ಆಭರಣ.
23,000 ರೂ. ಮೌಲ್ಯದ ಅರ್ಮಾನಿ ಎಕ್ಸ್ ಚೇಂಜ್ ವಾಚ್.
ಬಂಧಿತ ಆರೋಪಿಯು ಕೇವಲ ದಾವಣಗೆರೆ ಮಾತ್ರವಲ್ಲದೆ, ವಿವಿಧ ಜಿಲ್ಲೆಗಳಲ್ಲಿ ಒಟ್ಟು 19 ಹಗಲು ಕನ್ನ ಕಳುವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಕೆ.ಟಿ.ಜೆ ನಗರ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಹೆಚ್.ಎಸ್. ನೇತೃತ್ವದ ತಂಡದ ಈ ಸಾಧನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.









