ಬೆಂಗಳೂರಿನಲ್ಲಿ ಮನೆಗಳ ಕಿಟಕಿ ಮೂಲಕ ನುಗ್ಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಳ್ಳತನ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಮೈಕೋಲೇಔಟ್ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.ಕಳೆದ ಮಾರ್ಚ್ 28ರಂದು ಬಿಟಿಎಂ 2ನೇ ಹಂತದ ಮಹದೇಶ್ವರನಗರದಲ್ಲಿರುವ ಮನೆಯೊಂದಕ್ಕೆ ಕಿಟಕಿ ಮೂಲಕ ನುಗ್ಗಿದ್ದ ಕಳ್ಳರು, ಟೇಬಲ್ ಮೇಲಿಟ್ಟಿದ್ದ 3 ಮೊಬೈಲ್ ಹಾಗೂ ನಗದನ್ನು ಕಳವು ಮಾಡಿದ್ದರು. ಈ ಬಗ್ಗೆ ಮೈಕೋಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತಾ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಪೊಲೀಸರು, ಮಾರ್ಚ್ 31ರಂದು ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದ ಬಳಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದರು. ವಿಚಾರಣೆಯ ವೇಳೆ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಬೆಂಗಳೂರಿನ ವಿವಿಧೆಡೆ ಕಳ್ಳತನ ಮಾಡಿದ್ದ ವಸ್ತುಗಳನ್ನು ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದರು.
ಆರೋಪಿಗಳ ಬಳಿಯಿಂದ ಒಟ್ಟು 23 ಮೊಬೈಲ್, 3 ಲ್ಯಾಪ್‌ಟಾಪ್ ಮತ್ತು 1 ಟ್ಯಾಬ್ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ ಸುಮಾರು 5 ಲಕ್ಷದ 79 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಇವರ ಬಂಧನದಿಂದ ಮೈಕೋಲೇಔಟ್ ಮತ್ತು ಮಾರತ್ತಹಳ್ಳಿ ಠಾಣೆಗಳ ಕಳ್ಳತನ ಪ್ರಕರಣಗಳು ಸುಳಿವು ಸಿಕ್ಕಂತಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಚರಣೆಯನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಮೊಹಮ್ಮದ್ ಸುಜೀತ.ಎಂ.ಎಸ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಮೈಕೋಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಶಿವಶಂಕರ ರೆಡ್ಡಿರವರ ನೇತೃತ್ವದಲ್ಲಿ, ಮೈಕೋಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ನಟರಾಜ್.ಡಿ.ಎನ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿರವರುಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









