ಕಳೆದ ನಾಲ್ಕು ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಖತರ್ನಾಕ್ ಆರೋಪಿಯೊಬ್ಬನನ್ನು ಸಿದ್ದಾಪುರ ಪೊಲೀಸರು ಅಚ್ಚರಿಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಭಿಕ್ಷುಕನ ವೇಷದಲ್ಲಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರ ಸಾಹಸಗಾಥೆ.
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದಿದ್ದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 4 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಹಳ್ಳೂರಕೇರಿ ನಿವಾಸಿ ಫಾರುಖ್ ಅಲಿಯಾಸ್ ಫಾರುಖ್ ಉಲ್ಲಾ (24 ವರ್ಷ) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 457 ಮತ್ತು 380ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯದಿಂದ ವಾರೆಂಟ್ ಹೊರಬಿದ್ದಿದ್ದರೂ ಪೊಲೀಸರಿಗೆ ಸಿಗದೆ ಫಾರುಖ್ ತಪ್ಪಿಸಿಕೊಳ್ಳುತ್ತಿದ್ದ. ಶಿವಮೊಗ್ಗ, ಹಾವೇರಿ ಹಾಗೂ ಮಂಗಳೂರು ಭಾಗಗಳಲ್ಲಿ ಹುಡುಕಾಟ ನಡೆಸಿದ ಪೊಲೀಸರಿಗೆ ಈತ ಉಡುಪಿ ಜಿಲ್ಲೆಯ ತ್ರಾಸಿಯಲ್ಲಿ ಇರುವುದು ತಿಳಿದುಬಂದಿದೆ. ವಿಶೇಷವೆಂದರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ತನ್ನ ವೇಷ ಬದಲಿಸಿಕೊಂಡು ಬಿಕ್ಷಾಟನೆಯಲ್ಲಿ ತೊಡಗಿದ್ದ ಎನ್ನಲಾಗಿದೆ.
ಸಿದ್ದಾಪುರ ಠಾಣೆಯ ತನಿಖಾ ವಿಭಾಗದ ಪಿಎಸ್‌ಐ ನಾಗಪ್ಪ ಬಿ. ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ತಂಡದಲ್ಲಿ ಚೇತನಕುಮಾರ ಹಲಗೇರಿ, ಭರತ ಕುಮಾರ ಕೆ.ಜೆ. , ಶಶಿಕಾಂತ ನಾಯ್ಕ ಸಿಬ್ಬಂದಿಗಳು ಶ್ರಮಿಸಿದ್ದಾರೆ .ಬಂಧಿತ ಆರೋಪಿಯನ್ನು ಸಿದ್ದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸುದೀರ್ಘ ಕಾಲದ ನಂತರ ಆರೋಪಿಯನ್ನು ಪತ್ತೆಹಚ್ಚಿದ ತಂಡಕ್ಕೆ ಮೇಲಾಧಿಕಾರಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.







