ಕೊಡಗು ಜಿಲ್ಲೆಯ ಕುಟ್ಟಾದಲ್ಲಿರುವ ಹೋಂಸ್ಟೇ ಒಂದರಲ್ಲಿ ಕಳೆದ ವಾರ ಅಮೆರಿಕ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆಯು ಜನಪ್ರಿಯ ಗಿರಿಧಾಮವಾದ ಕೊಡಗಿನ ಮೇಲೆ ಕಪ್ಪುಚುಕ್ಕೆಯನ್ನಿಟ್ಟಿದೆ.
ಘಟನೆಯ ವಿವರಗಳು: ತಮಗೆ ನೀಡಿದ ಪಾನೀಯದಲ್ಲಿ ಮಾದಕವಸ್ತು ಬೆರೆಸಿ ನಂತರ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಘಟನೆಯ ನಂತರ ಸತತ ಮೂರು ದಿನಗಳ ಕಾಲ ಹೋಂಸ್ಟೇನಲ್ಲಿ ವೈ-ಫೈ (Wi-Fi) ಸಂಪರ್ಕವನ್ನು ಕಡಿತಗೊಳಿಸಲಾಗಿದ್ದರಿಂದ ತಕ್ಷಣವೇ ಸಹಾಯ ಪಡೆಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಹೋಂಸ್ಟೇನಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಅಡುಗೆಯವ ಬ್ರಿಜೇಶ್ ಕುಮಾರ್ ಎಂಬಾತನನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ.ಅಪರಾಧವನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಹೋಂಸ್ಟೇ ಮಾಲೀಕ ವಿಶಾಲ್ ಪೊನ್ನಣ್ಣ ಎಂಬುವವರನ್ನು ಬಂಧಿಸಲಾಗಿದೆ.ಇಬ್ಬರನ್ನೂ ಮೇ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ವಾಷಿಂಗ್ಟನ್ ಮೂಲದ ಈ ಏಕಾಂಗಿ ಪ್ರವಾಸಿ ಮಹಿಳೆ, ಮಾರ್ಚ್ ತಿಂಗಳಿನಲ್ಲಿ ಒಮ್ಮೆ ಈ ಹೋಂಸ್ಟೇಗೆ ಭೇಟಿ ನೀಡಿದ್ದರು. ಏಪ್ರಿಲ್ 12 ರಂದು ಎರಡನೇ ಬಾರಿಗೆ ಇಲ್ಲಿಗೆ ಬಂದಿದ್ದರು. ಪಾನೀಯ ಸೇವಿಸಿದ ನಂತರ ತಾವು ಅರೆಪ್ರಜ್ಞಾವಸ್ಥೆಗೆ ಜಾರಿದಾಗ ಈ ಕೃತ್ಯ ನಡೆದಿದೆ ಎಂದು ಅವರು ದೂರಿದ್ದಾರೆ.ಏಪ್ರಿಲ್ 17 ರಂದು ಅವರು ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಭಾರತ ಸರ್ಕಾರಕ್ಕೆ ರವಾನಿಸಲಾಯಿತು, ನಂತರ ಕರ್ನಾಟಕ ಗೃಹ ಇಲಾಖೆಗೆ ಎಚ್ಚರಿಕೆ ನೀಡಿದ ಮೇಲೆ ಏಪ್ರಿಲ್ 19 ರಂದು ಪ್ರಕರಣ ದಾಖಲಿಸಿಕೊಳ್ಳಲಾಯಿತು.ಘಟನೆಯ ನಂತರ ಮೂರು ದಿನಗಳ ಕಾಲ ಹೋಂಸ್ಟೇ ವೈ-ಫೈ ಸಂಪರ್ಕ ಕಡಿತಗೊಳಿಸಲಾಗಿತ್ತು, ಇದರಿಂದ ಹೊರಗಿನವರನ್ನು ಸಂಪರ್ಕಿಸಲು ತೊಂದರೆಯಾಯಿತು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.ಏಪ್ರಿಲ್ 17 ರವರೆಗೆ ಅದೇ ಸ್ಥಳದಲ್ಲಿದ್ದ ಅವರು, ನಂತರ ಮೈಸೂರಿಗೆ ತೆರಳಿ ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ನಂತರ ತಕ್ಷಣ ದೂರು ನೀಡಲು ಅವರು ಸಂಕೋಚಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಪೊಲೀಸರು ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. “ಸದರಿ ಹೋಂಸ್ಟೇ ಪರವಾನಗಿ ಹೊಂದಿದೆಯೇ ಮತ್ತು ಎಸ್‌ಒಪಿ (SOP) ನಿಯಮಗಳನ್ನು ಪಾಲಿಸುತ್ತಿದೆಯೇ ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಹೇಳಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅವರು ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.







