ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಸಿಡಿಲಬ್ಬರದ ದಾಳಿ ನಡೆಸಿದ್ದು, ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಶ್ಚಿಮ ಬಂಗಾಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ ಫಿರೋಜ್ ಪಾಷಾ ಮತ್ತು ರಾಣಾ ಸರ್ಕಾರ್ ಬಂಧಿತ ಆರೋಪಿಗಳು. ಇವರಿಂದ ಒಟ್ಟು 36 ಕೆ.ಜಿ. ಒಣಗಿದ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಅಬಕಾರಿ ಇಲಾಖೆಯ ಜಂಟಿ ಆಯುಕ್ತರಾದ ಫಿರೋಜ್ ಕಿಲ್ಲೆದಾರ್ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.ಶ್ರೀರಾಮಪುರ ವಲಯ ವ್ಯಾಪ್ತಿಯ ಜಾಕ್ಕಯ್ಯನಕೆರೆ ಮತ್ತು ರೈಲ್ವೆ ನಿಲ್ದಾಣದ ಸುತ್ತಮುತ್ತ ಅಬಕಾರಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ದಾಳಿ ನಡೆಸಿದ್ದರು. ಈ ವೇಳೆ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಮಾಲು ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ತನಿಖೆಯ ವೇಳೆ ಲಭ್ಯವಾದ ಮಾಹಿತಿಯಂತೆ, ಆರೋಪಿಗಳು ಈ ಗಾಂಜಾವನ್ನು ಒರಿಸ್ಸಾ ಮೂಲದಿಂದ ರೈಲಿನ ಮೂಲಕ ಬೆಂಗಳೂರಿಗೆ ತಂದಿದ್ದರು ಎಂಬುದು ತಿಳಿದುಬಂದಿದೆ. ನಗರದ ವಿವಿಧ ಭಾಗಗಳಲ್ಲಿ ಇವುಗಳನ್ನು ಪೂರೈಸುವ ಉದ್ದೇಶ ಇವರದ್ದಾಗಿತ್ತು.ಬಂಧಿತರ ವಿರುದ್ಧ NDPS ಕಾಯ್ದೆ (ಮಾದಕ ದ್ರವ್ಯ ಮತ್ತು ಮನೋವೈಜ್ಞಾನಿಕ ಪದಾರ್ಥಗಳ ಕಾಯ್ದೆ) 1985 ರ ಅಡಿಯಲ್ಲಿ ಒಟ್ಟು 3 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಜಾಲದ ಹಿಂದೆ ಇರುವ ಇತರ ವ್ಯಕ್ತಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.






