ಶಿಡ್ಲಘಟ್ಟ ನಗರದಲ್ಲಿ ಸತತವಾಗಿ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 07/05/2026 ರಂದು ಮಧ್ಯಾಹ್ನ ಸುಮಾರು 2:00 ಗಂಟೆಯ ಸಮಯದಲ್ಲಿ, ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯ ಬಳಿ ನಿಲ್ಲಿಸಿದ್ದ ಇನಾಯತ್ ಎಂಬುವವರಿಗೆ ಸೇರಿದ ಹಿರೋ ಪ್ಯಾಷನ್ ಪ್ರೊ (KA 40-S-0832) ವಾಹನ ಕಳ್ಳತನವಾಗಿತ್ತು. ಈ ಬಗ್ಗೆ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.
ಪೊಲೀಸರು ನಡೆಸಿದ ಖಚಿತ ಕಾರ್ಯಾಚರಣೆಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ, ಪ್ರಸ್ತುತ ಶಿಡ್ಲಘಟ್ಟದ ದರ್ಗಾ ಮೊಹಲ್ಲಾದಲ್ಲಿ ವಾಸವಿರುವ ಸೈಯದ್ ಯಾಸಿನ್ ಪಾಷಾ (29) ಎಂಬಾತನನ್ನು ಬಂಧಿಸಲಾಗಿದೆ. ಈತ ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಆರೋಪಿಯಿಂದ ಈ ಕೆಳಗಿನ ಐದು ವಾಹನಗಳನ್ನು ಜಪ್ತಿ ಮಾಡಲಾಗಿದೆ:
- KA 40-S-0832 (ಪ್ಯಾಷನ್ ಪ್ರೊ)
- KA 40-EW-2930
- KA 07-R-9622
- KA 03-HJ-8822
- ನೊಂದಣಿ ಸಂಖ್ಯೆ ಇಲ್ಲದ ಹಿರೋ ಹೋಂಡಾ ಸ್ಪ್ಲೆಂಡರ್
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಕುಶಾಲ್ ಚೋಕೆ, ಐ.ಪಿ.ಎಸ್ ಹಾಗೂ ಎ.ಎಸ್.ಪಿ ಜಗನ್ನಾಥ್ ರೈ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ತನಿಖಾ ತಂಡದಲ್ಲಿ ಭಾಗವಹಿಸಿದವರು: ಶಿಡ್ಲಘಟ್ಟ ವೃತ್ತ ನಿರೀಕ್ಷಕರಾದ ಆನಂದ್ ಕುಮಾರ್ ಜೆ.ಎನ್, ಪಿ.ಎಸ್.ಐ ವೇಣುಗೋಪಾಲ್ ಎಂ, ಹಾಗೂ ಸಿಬ್ಬಂದಿಗಳಾದ ಜಗದೀಶ್, ನಾರಾಯಣಸ್ವಾಮಿ, ಸಂಪತ್ತು, ನಂದೀಶ್, ಕೆಂಪರಾಜು ಮತ್ತು ನಟೇಶ್ ಅವರನ್ನೊಳಗೊಂಡ ತಂಡವು ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ. ಈ ತಂಡದ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.







