ಬೆಂಗಳೂರಿನ ಅಶೋಕನಗರ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಐವರು ಅಂತರರಾಜ್ಯ ಡ್ರಗ್ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳಿಂದ ಬರೋಬ್ಬರಿ 3 ಕೆಜಿ 686 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 2.56 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಬಂಧಿತರು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು, ಹೊರರಾಜ್ಯಗಳಿಂದ ಕಡಿಮೆ ಬೆಲೆಗೆ ಈ ಮಾದಕ ವಸ್ತುವನ್ನು ತಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಸದ್ಯ ಐದೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇವರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮುಖ್ಯಸ್ಥರಿಗಾಗಿ ಹುಡುಕಾಟ ಮುಂದುವರೆದಿದೆ.
ಈ ಕಾರ್ಯಾಚರಣೆಗಳನ್ನು ಉಪ ಪೊಲೀಸ್ ಆಯುಕ್ತರುಗಳಾದ, ಕೇಂದ್ರ ವಿಭಾಗದ ಶ್ರೀ.ಅಕ್ಷಯ್.ಎಂ.ಹಾಕೆ, ಐಪಿಎಸ್ ಹಾಗೂ ಉತ್ತರ ವಿಭಾಗದ ಶ್ರೀ.ಬಿ.ಎಸ್.ನೇಮಗೌಡ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತರುಗಳಾದ ಕಬ್ಬನ್‌ಪಾರ್ಕ್ ಉಪ ವಿಭಾಗದ ಡಾ.ಪ್ರಿಯದರ್ಶಿನಿ ಈಶ್ವರ ಸಾನಿಕೊಪ್ಪ ಹಾಗೂ ಮಲ್ಲೇಶ್ವರಂ ಉಪವಿಭಾಗದ ಶ್ರೀ.ವೇಣುಗೋಪಾಲ್.ಬಿ.ಆರ್ ರವರ ನೇತೃತ್ವದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್‌ರವರುಗಳಾದ ಅಶೋಕನಗರ ಪೊಲೀಸ್ ಠಾಣೆಯ ಶ್ರೀ.ರವಿ.ಕೆ.ಬಿ ಹಾಗೂ ಮಲ್ಲೇಶ್ವರಂ ಪೊಲೀಸ್ ಠಾಣೆಯ ಶ್ರೀ.ಯಶವಂತಕುಮಾರ್.ಹೆಚ್.ಎಂ ಹಾಗೂ ಅಧಿಕಾರಿ ,ಸಿಬ್ಬಂದಿಯವರುಗಳ ತಂಡ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









