ಕೆಲಸಕ್ಕೆಂದು ಸೇರಿಕೊಂಡು ಮನೆಯವರ ನಂಬಿಕೆ ಗಳಿಸಿ, ಅದೇ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಕಳ್ಳಿಯನ್ನು ಬೆಂಗಳೂರಿನ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 30 ಲಕ್ಷ ರೂಪಾಯಿಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದೊಡ್ಡಕಲ್ಲಸಂದ್ರದ ನಿವಾಸಿಯೊಬ್ಬರ ಮನೆಯಲ್ಲಿ ಸುಮಾರು 8 ತಿಂಗಳಿಂದ ಕೆಲಸಕ್ಕಿದ್ದ ಮಹಿಳೆಯೊಬ್ಬಳು, ಫೆಬ್ರವರಿ 2 ರಂದು ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಎಗರಿಸಿದ್ದಾಳೆ. ಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
ಅನುಮಾನದ ಮೇರೆಗೆ ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವ ಸತ್ಯ ಬೆಳಕಿಗೆ ಬಂದಿದೆ. ಆರೋಪಿಯು ಕಳವು ಮಾಡಿದ ಆಭರಣಗಳಲ್ಲಿ ಕೆಲವನ್ನು ಜ್ಯುವೆಲರಿ ಅಂಗಡಿಯಲ್ಲಿ ಅಡಮಾನವಿಟ್ಟಿದ್ದಳು, ಇನ್ನು ಕೆಲವನ್ನು ತನ್ನ ಸ್ನೇಹಿತೆಯರಿಗೆ ಹಂಚಿದ್ದಳು.

ಪೊಲೀಸರು ಆರೋಪಿಯ ಮನೆಯಿಂದ ಹಾಗೂ ಆಕೆ ಅಡಮಾನವಿಟ್ಟಿದ್ದ ಸ್ಥಳಗಳಿಂದ ಒಟ್ಟು 210 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ಇದರ ಒಟ್ಟು ಮೌಲ್ಯ ಅಂದಾಜು 30 ಲಕ್ಷ ರೂಪಾಯಿ.
ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ನೈರುತ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ. ಅನಿತಾ ಬಿ ಹದ್ದಣವರ್, ಐಪಿಎಸ್ರವರ ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಎಸ್.ಬಿ ಗಿರೀಶ್ ರವರ ನೇತೃತ್ವದಲ್ಲಿ, ಕೋಣನಕುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಪಾಪಣ್ಣ ಎಂ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡ ಈ ಪ್ರಕರಣವನ್ನು ಭೇದಿಸುವಲ್ಲಿ ಯಶ್ವಸ್ವಿಯಾಗಿರುತ್ತಾರೆ.
ಮನೆಗೆ ಕೆಲಸದವರನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆ ಹಾಗೂ ಗುರುತಿನ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಗತ್ಯ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.









