ಬೆಂಗಳೂರಿನ ವಿಜಯನಗರದಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು, ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಮೋಜಿನ ಜೀವನಕ್ಕಾಗಿ ಸಾರ್ವಜನಿಕ ರಸ್ತೆಯಲ್ಲಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಈಗ ಕಂಬಿ ಎಣಿಸುವಂತೆ ಮಾಡಲಾಗಿದೆ.
ಫೆಬ್ರವರಿ 5 ರ ಸಂಜೆ ಹಂಪಿನಗರದ ನಿವಾಸಿ ಶ್ರೀಮತಿ ದಾಕ್ಷಾಯಿಣಿಯವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ, ಹಿಂದಿನಿಂದ ಬಂದ ಅಪರಿಚಿತನೊಬ್ಬ ಅವರ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಓಡಿದ್ದಾನೆ.
ಅದೇ ಮಾರ್ಗದಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದ ಸಿಎಆರ್ (CAR) ಘಟಕದ ಎ.ಪಿ.ಸಿ ಹಣಮಂತ ಪುಟಾಣಿ (APC-18643) ಅವರು ಕಿರುಚಾಟ ಕೇಳಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಓಡುತ್ತಿದ್ದ ಕಳ್ಳನನ್ನು ಬೆನ್ನಟ್ಟಿ, ಸಾರ್ವಜನಿಕರ ಸಹಾಯದೊಂದಿಗೆ ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ ಸೈಯದ್ ಜಾಫರ್‌ನಿಂದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಶ್ಯಾಮಣ್ಣ ಗಾರ್ಡನ್ ನಿವಾಸಿಯಾದ 20 ವರ್ಷದ ಸೈಯದ್ ಜಾಫರ್, ತನ್ನ ಐಷಾರಾಮಿ ಮತ್ತು ಮೋಜಿನ ಜೀವನಕ್ಕಾಗಿ ಹಣ ಹೊಂದಿಸಲು ಇಂತಹ ಕೃತ್ಯಗಳನ್ನು ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಜೀವಾಪಾಯವನ್ನೂ ಲೆಕ್ಕಿಸದೆ ಕಳ್ಳನನ್ನು ಹಿಡಿದ ಎ.ಪಿ.ಸಿ ಹಣಮಂತ ಪುಟಾಣಿ ಅವರ ಸಾಹಸಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಐ.ಪಿ.ಎಸ್ ಅವರು ವಿಶೇಷ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.









