ಕೋಲಾರದ ಹೊರವಯದಲ್ಲಿರುವ ಟಮಕ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಅನುಮಾನಾಸ್ಪದ ಸೂಟ್ ಕೇಸ್ ಒಂದು ಪತ್ತೆಯಾಗಿದೆ.ಇದನ್ನು ನೋಡಿದ ಜನರು ಅದರಲ್ಲಿ ಸ್ಫೋಟಕಗಳೇನಾದರೂ ಇರಬಹುದು ಎಂಬದು ಆತಂಕ ವ್ಯಕ್ತಪಡಿಸಿದ್ದಾರೆ.ಜೊತೆಗೆ ಸೂಟ್‌ಕೇಸ್‌ನಿಂದ ಅಲಾರಂ ರೀತಿಯ ಶಬ್ದ ಬರುತ್ತಿತ್ತು ಎನ್ನಲಾಗಿದೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.ಕೂಡಲೇ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ಪರಿಶೀಲನೆ ನಡೆಸಿದರು.ಆದ್ರೆ ಅಲ್ಲೇನೂ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ ಎಲ್ಲರೂ ನಿಟ್ಟುಸಿರುಬಿಟ್ಟಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ ಸೂಟ್ ಕೇಸ್ ಪರಿಶೀಲನೆ ಮಾಡಿದಾಗ ಅದು ಕ್ರೌನ್ ಎಂಬ ಕಂಪನಿಗೆ ಸೇರಿದ ಸೂಟ್‌ಕೇಸ್ ಆಗಿದೆ. ಅದನ್ನು ತೆರೆಯಲು ಪಾಸ್‌ವರ್ಡ್ ಬೇಕು. ಪಾಸ್‌ವರ್ಡ್ ತಪ್ಪಾಗಿ ಎಂಟರ್ ಮಾಡಿದರೆ ಅದರಲ್ಲಿ ಅಲಾರಂ ಶಬ್ದ ಮಾಡುತ್ತದೆ. ಯಾರೋ ತಪ್ಪಾಗಿ ಪಾಸ್‌ವರ್ಡ್ ಹಾಕಿದ್ದರಿಂದ ಅದರಿಂದ ಶಬ್ದ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.ಆ ಸೂಟ್ ಕೇಸ್ ಯಾರದು.? ಯಾಕೆ ಅಲ್ಲಿ ಬಿಟ್ಟುಹೋದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









