ಬಾಗಲಕೋಟೆ : ಬ್ಯಾಂಕ್‌ವೊಂದರಲ್ಲಿ ದರೋಡೆ ಮಾಡಲು ಹೊರಟಿದ್ದ ದರೋಡೆಕೋರರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾಕಟ್ಟಿ ಕ್ರಾಸ್ ಬಳಿ ಕಾರ್‌ವೊಂದರಲ್ಲಿ ಹೊರಟಿದ್ದ ವೇಳೆ ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರದ ತನ್ನೀರ್ ಹೊನ್ನುಟಗಿ, ರಮೇಶ ಕಾಳೆ, ವಸೀಂ ಶೇಖ್ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ. ಬಾಗಲಕೋಟೆಯ ನಿತೇಶ್, ಚಾಂದ್ ಬಾಷಾ ಚಿತ್ತಾಪೂರ, ವಿಜಯಪುರದ ಭರತ್ ಅಗರವಾಲ್ ಪರಾರಿಯಾಗಿದ್ದಾರೆ. ಪ್ರಕರಣದಲ್ಲಿ ಹುಲಗಪ್ಪ ಪಾತ್ರೋಟಿ, ನಾಗೇಶ ಇಂಗಳೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳು ಕಾರ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್, ಗ್ಯಾಸ್ ಕಟರ್, ಖಾರದ ಪುಡಿ, ಕಬ್ಬಿಣದ ರಾಡ್ ಇಟ್ಟುಕೊಂಡಿದ್ದರು. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಶಿರೂರಿನ ಕೆನರಾ ಬ್ಯಾಂಕ್ ದರೋಡೆಗೆ ಹೊರಟಿದ್ದಾಗಿ ತಿಳಿಸಿದ್ದಾರೆ. ಇದೇ ಆರೋಪಿಗಳು ಅ.24 ರಂದು ರಾಂಪೂರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಸ್ಟ್ರಾಂಗ್ ರೂಂ ಕೊರೆಯಲು ಯತ್ನಿಸಿದ್ದು, ಪ್ರಯತ್ನ ಫಲ ನೀಡದ ಕಾರಣ ಪರಾರಿಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಎಸ್‌ಪಿ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಸಿಪಿಐ ಎಚ್. ಆರ್.ಪಾಟೀಲ, ಪಿಎಸ್‌ಐಗಳಾದ ಎಸ್.ಎನ್.ಸಂಗಳದ, ಆರ್.ಡಿ.ಲಮಾಣಿ, ಎಎಸ್‌ಐ ಎಂ.ಬಿ.ಬಳಬಟ್ಟಿಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತ್ವರಿತವಾಗಿ ಪ್ರಕರಣ ಭೇದಿಸಿದ ತಂಡಕ್ಕೆ ಎಸ್‌ಪಿ ಅಮರನಾಥ ರೆಡ್ಡಿ ಬಹುಮಾನ ಘೋಷಿಸಿದ್ದಾರೆ.








