ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಕೇವಲ ಎರಡು ದಿನಗಳ ಅಂತರದಲ್ಲಿ ಭರ್ಜರಿ ಕಾರ್ಯಾಚರಣೆನಡೆಸಿರುವ ಪೊಲೀಸರು, ಮನೆ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೀಲಿ ಕೈಯನ್ನು ಶೂ ರಾಕ್‌ನಲ್ಲಿ ಇಟ್ಟು ಹೋಗುತ್ತಿದ್ದ ಮನೆಯ ಮಾಲೀಕರ ಅಜಾಗರೂಕತೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಕಳ್ಳ ಈಗ ಕಂಬಿ ಎಣಿಸುತ್ತಿದ್ದಾನೆ.
ಫೆಬ್ರವರಿ 11 ರಂದು ವೈಟ್‌ಫೀಲ್ಡ್‌ನ ನಾಗೊಂಡನಹಳ್ಳಿಯ ನಿವಾಸಿಯೊಬ್ಬರು ಕೆಲಸದ ನಿಮಿತ್ತ ಹೊರಹೋಗುವಾಗ, ಮಕ್ಕಳು ಬರುತ್ತಾರೆಂಬ ಕಾರಣಕ್ಕೆ ಮನೆಯ ಕೀಲಿ ಕೈಯನ್ನು ಹೊರಗಿನ ಶೂ ರಾಕ್‌ನಲ್ಲಿ ಇಟ್ಟು ಹೋಗಿದ್ದರು. ಸಂಜೆ ಬಂದು ನೋಡಿದಾಗ ಬೀರುವಿನಲ್ಲಿದ್ದ ಅಂದಾಜು 348 ಗ್ರಾಂಚಿನ್ನಾಭರಣ ಕಳುವಾಗಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣ ದಾಖಲಿಸಿಕೊಂಡ ವೈಟ್‌ಫೀಲ್ಡ್ ಪೊಲೀಸರು ತನಿಖೆ ಚುರುಕುಗೊಳಿಸಿ, ಫೆಬ್ರವರಿ 13 ರಂದು ವರ್ತೂರು ಕೋಡಿ ಹತ್ತಿರ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆರೋಪಿಯು ಕೃತ್ಯವನ್ನು ಒಪ್ಪಿಕೊಂಡಿದ್ದು, ಆತನ ಮನೆಯಲ್ಲಿದ್ದ ಸುಮಾರು 55 ಲಕ್ಷ ರೂಪಾಯಿ ಮೌಲ್ಯದ 348 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿ 14 ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್ ಪೀಲ್ಡ್ ಶ್ರೀ ಸೈದುಲ್ ಅಡಾವತ್. ಐ.ಪಿ.ಎಸ್, ಸಹಾಯಕ ಪೊಲೀಸ್ ಆಯುಕ್ತರು, ವೈಟ್ ಫೀಲ್ಡ್ ಉಪ ವಿಭಾಗ ಶ್ರೀಮತಿ ರೀನಾ ಸುವರ್ಣ ರವರ ಮಾರ್ಗದರ್ಶನದಲ್ಲಿ ವೈಟ್ ಫೀಲ್ಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಗುರುಪ್ರಸಾದ್. ಎಹಾಗು ಇತರೆ ಅಧಿಕಾರಿ ಮತ್ತು ಸಿಬ್ಬಂದಿರವರು ತಂಡ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









