ಗಿರಿನಗರ ಪೊಲೀಸ್ ಠಾಣಾ ಸರಹದ್ದಿನ, ಬನಶಂಕರಿ 3ನೇ ಹಂತದಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:20/02/2025 ರಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಪತ್ನಿಯೊಂದಿಗೆ ದಿನಾಂಕ:18/01/2025 ರಂದು ಕೆಲಸದ ನಿಮಿತ್ತಾ ಮುಂಬೈಗೆ ತೆರಳಿರುತ್ತಾರೆ. ಪಿರಾದುದಾರರ ಮನೆಯಲ್ಲಿ ಪತ್ನಿಯ ತಂಗಿ ಮತ್ತು ಆಕೆಯ ಮಗ ಇರುತ್ತಾರೆ. ದಿನಾಂಕ:02/02/2025 ರಂದು ಪಿರಾದುದಾರರು ಪತ್ನಿಯೊಂದಿಗೆ ವಾಪಸ್ ವಾಪಸ್ ಮನೆಗೆ ಬಂದಿರುತ್ತಾರೆ. ದಿನಾಂಕ:20/02/2025 ರಂದು ಮನೆಯಲ್ಲಿಟ್ಟಿದ್ದ ಗೋದ್ರೇಜ್ ಲಾಕರ್‌ನ್ನು ತೆಗೆಯಲು ಹೋದಾಗ ಲಾಕರ್‌ನ ಬಾಗಿಲು ತೆರೆದಿರುವುದು ಕಂಡುಬಂದಿರುತ್ತದೆ. ಹಾಗೂ ಲಾಕರ್‌ನಲ್ಲಿಟ್ಟಿದ್ದ 325 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುತ್ತವೆಯೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣವು ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ದಿನಾಂಕ:28/04/2025 ರಂದು ಪಿರಾದುದಾರರ ಪತ್ನಿಯ ತಂಗಿಯ ಮಗನು ಚನೈನ ಒಂದು ಕಂಪನಿಯಲ್ಲಿ ಉದ್ಯೋಗಿಯಾಗಿದ್ದವನನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:29/04/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಕಳವು ಮಾಡಿದ ಚಿನ್ನಾಭರಣಗಳನ್ನು ಸ್ನೇಹಿತನ ಮುಖಾಂತರ ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ 02 ಜ್ಯೂವಲರಿ ಅಂಗಡಿಗಳಲ್ಲಿ ಮತ್ತು ಚೆನೈನಲ್ಲಿರುವ ಜ್ಯೂವಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ. ಆರೋಪಿಯು ತಿಳಿಸಿದ ಜ್ಯೂವಲರಿ ಅಂಗಡಿಯ ಮಾಲೀಕರುಗಳಿಗೆ ಹಾಗೂ ಸ್ನೇಹಿತನಿಗೆ ನೋಟೀಸ್ ಜಾರಿ ಮಾಡಲಾಗಿರುತ್ತದೆ.
ದಿನಾಂಕ:01/05/2025 ರಂದು ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ 02 ಜ್ಯೂವಲರಿ ಅಂಗಡಿಯ ಮಾಲೀಕರುಗಳು ಠಾಣೆಗೆ ತಂದು ಹಾಜರು ಪಡಿಸಿದ 77 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:02/05/2025 ರಂದು ಚೆನೈನಲ್ಲಿರುವ ಜ್ಯೂವಲರಿ ಅಂಗಡಿಯ ಮಾಲೀಕನು ಠಾಣೆಗೆ ತಂದು ಹಾಜರು ಪಡಿಸಿದ 4 ಗ್ರಾಂ ಚಿನ್ನದ ಒಡವೆಯನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:03/05/2025 ರಂದು ಆರೋಪಿಯ ಸ್ನೇಹಿತನು ಠಾಣೆಗೆ ತಂದು ಹಾಜರು ಪಡಿಸಿದ 77 ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.
ಒಟ್ಟಾರೆ ಈ ಪ್ರಕರಣದ ಆರೋಪಿಯಿಂದ 258 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ * 24,51,000/- (ಇಪ್ಪತ್ತನಾಲ್ಕು ಲಕ್ಷದ ಐವತ್ತೊಂದು ಸಾವಿರ ರೂಪಾಯಿ).
ಈ ಪ್ರಕರಣದ ಆರೋಪಿಯ ಬಂಧನದಿಂದ ಗಿರಿನಗರ ಪೊಲೀಸ್ ಠಾಣೆಯ 01 ಮನೆ ಕನ್ನ ಕಳವು ಪ್ರಕರಣ ಪತ್ತೆಯಾಗಿರುತ್ತದೆ.
ದಿನಾಂಕ:06/05/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಲೋಕೇಶ್ ಭರಮಪ್ಪ ಜಗಳಾಸ ಹಾಗೂ ವಿ.ವಿ.ಪುರಂ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶಾಮಿದ್‌ಬಾಷ್ ರವರ ಮಾರ್ಗದರ್ಶನದಲ್ಲಿ ಗಿರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಸತೀಶ್ ಕುಮಾರ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









