ಬೇಗೂರು ಪೊಲೀಸರು ಮನೆ ಕನ್ನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ ಅಂದಾಜು 72 ಲಕ್ಷ ಮೌಲ್ಯದ 614 ಗ್ರಾಂ ಚಿನ್ನಾಭರಣಗಳು ಮತ್ತು 470 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವಪ್ರಿಯ ಲೇಔಟ್‌ನಲ್ಲಿ ಜೂನ್ 18, 2025 ರಂದು ದಾಖಲಾದ ಮನೆ ಕಳ್ಳತನ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆಗಸ್ಟ್ 6, 2025 ರಂದು ಓರ್ವ ಆರೋಪಿಯನ್ನು ಬಂಧಿಸಿದ್ದರು. ನಂತರ ಆತನ ಸಹಚರನನ್ನು ಸೆಪ್ಟೆಂಬರ್ 14, 2025 ರಂದು ವಶಕ್ಕೆ ಪಡೆಯಲಾಯಿತು.
ಆರೋಪಿಗಳ ವಿಚಾರಣೆ ನಂತರ, ಅವರು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಕೆ.ಜಿ.ಎಫ್ ಮತ್ತು ಚಿಂತಾಮಣಿ ತಾಲ್ಲೂಕಿನ ಒಟ್ಟು 6 ಗಿರವಿ/ಜ್ಯುವೆಲರಿ ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳ ಬಂಧನದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ ಒಟ್ಟು 5 ಕಳ್ಳತನ ಪ್ರಕರಣಗಳು (ಬೇಗೂರು – 3, ಹೊಸಕೋಟೆ – 1, ಚಿಕ್ಕಬಳ್ಳಾಪುರ – 1) ಪತ್ತೆಯಾಗಿವೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ನಾರಾಯಣ ಎಮ್. ಐ.ಪಿ.ಎಸ್. ಅವರ ಮಾರ್ಗದರ್ಶನದಲ್ಲಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರಾದ ಶ್ರೀ. ಕೆ.ಎಮ್. ಸತೀಶ ಅವರ ನೇತೃತ್ವದಲ್ಲಿ ಬೇಗೂರು ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಕೃಷ್ಣಕುಮಾರ್, ಪಿ.ಎಸ್, ಹಾಗೂ ಸಿಬ್ಬಂದಿಗಳ ತಂಡವು ನಡೆಸಿದೆ. ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.









