ಬೆಂಗಳೂರು ನಗರದಲ್ಲಿ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದ ಮೊಬೈಲ್ ಕಳ್ಳರ ಜಾಲವನ್ನು ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ (CCB) ಮಹಿಳಾ ಸಂರಕ್ಷಣಾ ದಳವು ಭೇದಿಸುವಲ್ಲಿ ಯಶಸ್ವಿಯಾಗಿದೆ.
ಸಿಸಿಬಿ ಪೊಲೀಸರು ನಡೆಸಿದ ಬಿಗಿ ಕಾರ್ಯಾಚರಣೆಯಲ್ಲಿ, ಆರು ಮಂದಿ ರೂಢಿಗತ ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳು ಬೆಂಗಳೂರು ನಗರದಾದ್ಯಂತ ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣಗಳು, ರೈಲ್ವೇ ನಿಲ್ದಾಣಗಳು ಮತ್ತು ದೇವಸ್ಥಾನಗಳ ಬಳಿ ಸಕ್ರಿಯರಾಗಿದ್ದರು.
ಆರೋಪಿಗಳು ಎರಡು ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಸಾರ್ವಜನಿಕರ ಗಮನ ಬೇರೆಡೆಗೆ ಸೆಳೆದು ಸರಣಿಯಾಗಿ ಮೊಬೈಲ್ ಫೋನ್‌ಗಳ ಸುಲಿಗೆ ಮತ್ತು ಕಳ್ಳತನ ನಡೆಸುತ್ತಿದ್ದರು. ಬಂಧಿತ ಎಲ್ಲ ಆರೋಪಿಗಳು ಮೈಸೂರು ರಸ್ತೆಯ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳ್ಳರಿಂದ ಬೃಹತ್ ಪ್ರಮಾಣದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಮೊಬೈಲ್‌ಗಳ ಸಂಖ್ಯೆ: ೪೨೨ ಸ್ಮಾರ್ಟ್ ಮೊಬೈಲ್ ಫೋನ್‌ಗಳು
ವಶಪಡಿಸಿಕೊಂಡ ಮೊಬೈಲ್‌ಗಳ ಮೌಲ್ಯ: ಸುಮಾರು ರೂ. ೭೦,೦೦,೦೦೦/-(ಎಪ್ಪತ್ತು ಲಕ್ಷ ರೂಪಾಯಿ)
ಕೃತ್ಯಕ್ಕೆ ಬಳಸಿದ ವಾಹನಗಳು: ಒಂದು ಆಟೋರಿಕ್ಷಾ ಮತ್ತು ಒಂದು ಹೋಂಡಾ ಡಿಯೋ ದ್ವಿಚಕ್ರ ವಾಹನ.
ಆರೋಪಿಗಳ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಮೂಲಕ ಕದ್ದ ಮೊಬೈಲ್‌ಗಳನ್ನು ಕಳೆದುಕೊಂಡಿದ್ದ ನಾಗರಿಕರಿಗೆ ತುಸು ನಿರಾಳತೆ ದೊರೆತಿದೆ.
ಇದು, ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಒಂದು ಮಹತ್ವದ ಸಾಧನೆಯಾಗಿದೆ.










