1 ಕೆ.ಜಿ 600 ಗ್ರಾಂಚಿನ್ನಾಭರಣ ಹಾಗೂ 450 ಗ್ರಾಂ ಬೆಳ್ಳಿಯ ವಸ್ತು ವಶ. ಮೌಲ್ಯ 1,12,26,000/-, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ, ಜಯನಗರ 3ನೇ ಹಂತದಲ್ಲಿ ವಾಸವಿರುವ ಪಿರಾದುದಾರರು, ಸುಮಾರು 2 ವರ್ಷಗಳಿಂದ ಮನೆಕೆಲಸಕ್ಕೆಂದು ನೇಪಾಳ ಮೂಲದ ಇಬ್ಬರು ವ್ಯಕ್ತಿಗಳನ್ನು ನೇಮಿಸಿಕೊಂಡಿರುತ್ತಾರೆ. ಪಿರಾದುದಾರರು ದಿನಾಂಕ:21/10/2024 ರ ರಾತ್ರಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರ ಕುಟುಂಬದ ಸದಸ್ಯರು ದಿನಾಂಕ:21/10/2024 ರಂದು ಸಂಜೆ ಹೊರಗಡೆ ಹೋಗಿದ್ದು, ಪಿರಾದುದಾರರ ಮನೆಯಲ್ಲಿ ಪಿರಾದುದಾರರ ತಂದೆಯವರು ಮಾತ್ರ ಮನೆಯಲ್ಲಿದ್ದು, ಪಿರಾದುದಾರರ ತಂದೆಯು ಆ ದಿನ ಸಂಜೆ ಮನೆಯಲ್ಲಿ ಮಧ್ಯಪಾನ ಮಾಡುತ್ತಿದ್ದಾಗ, ಪಿರಾದುದಾರರ ತಂದೆಗೆ ತಿಳಿಯದಂತೆ ಮಧ್ಯದೊಂದಿಗೆ ಪ್ರಜ್ಞೆ ತಪ್ಪಿಸುವ ಔಷಧಿಯನ್ನು ಮನೆಕೆಲಸದವರು ಬೆರೆಸಿರುತ್ತಾರೆ. ಪಿರಾದುದಾರರ ತಂದೆಯವರು ಮಧ್ಯಪಾನವನ್ನು ಸೇವಿಸಿದ ನಂತರ ಪ್ರಜ್ಞೆತಪ್ಪಿರುತ್ತಾರೆ. ಮನೆ ಕೆಲಸದವರಿಬ್ಬರು ಮನೆಯ ಕೊಠಡಿಯ ಬೀರುವಿನ್ನಲ್ಲಿಟ್ಟಿದ್ದ 2 ಕೆ.ಜಿ 510 ಗ್ರಾಂ ಚಿನ್ನಾಭರಣಗಳು ಹಾಗೂ ಬೆಳ್ಳಿಯ ವಸ್ತುಗಳನ್ನು ಹಾಗೂ 15 ಲಕ್ಷ ನಗದು ಹಣವನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:30/10/2024 ರಂದು ವರ್ತೂರಿನ ಬಲಗೆರೆ ರಸ್ತೆಯಲ್ಲಿ ಮೂವರು ನೇಪಾಳೆ ಮೂಲದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಚಿನ್ನಾಭರಣವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ ಹಾಗೂ ಪಿರಾದುದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಸಹ ಸೇರಿಕೊಂಡು ಕಳವು ಮಾಡಿರುವ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ.
ದಿನಾಂಕ:30/10/2024 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್’ ಅಭಿರಕ್ಷೆಗೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಮೂವರು ಆರೋಪಿಗಳ ಪೈಕಿ ಓರ್ವ ಆರೋಪಿಯು ತಾನು ವಾಸವಿರುವ ವರ್ತೂರಿನ ಮನೆಯಲ್ಲಿ ಕಳವು ಮಾಡಿದ ಚಿನ್ನಾಭರಣವನ್ನು ಇಟ್ಟಿರುವುದಾಗಿ ತಿಳಿಸಿದ ಮೇರೆಗೆ, ದಿನಾಂಕ:02/11/2024 ರಂದು 1 ಕೆ.ಜಿ 600 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 1,12,26,000/-(ಒಂದು ಕೋಟಿ ಹನ್ನೆರಡು ಲಕ್ಷದ ಇಪ್ಪತ್ತಾರು ಸಾವಿರು ರೂಪಾಯಿ), ಉಳಿದ ಚಿನ್ನಾಭರಣವನ್ನು ಪಿರಾದುದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆ ಇಬ್ಬರು ವ್ಯಕ್ತಿಗಳು ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ಆ ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.
ದಿನಾಂಕ:07/11/2024 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲೋಕೇಶ್ ಭರಮಪ್ಪ ಜಗಲಾಸ, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ನಾರಾಯಣಸ್ವಾಮಿ. ಎರವರ ನೇತೃತ್ವದಲ್ಲಿ, ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ದೀಪಕ.ಆರ್ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









