ಕೆಲಸಕ್ಕಿದ್ದ ಮನೆಯಲ್ಲೇ ₹25 ಲಕ್ಷ ಮೌಲ್ಯದ ಆಭರಣ ಕಳವು.ಕೋರಮಂಗಲ ಪೊಲೀಸರಿಂದ ಹೊರರಾಜ್ಯದ ಆರೋಪಿಯ ಬಂಧನ.172 ಗ್ರಾಂ ಚಿನ್ನ, ವಜ್ರ ಹಾಗೂ ನಗದು ವಶ.
ಬೆಂಗಳೂರಿನ ಕೋರಮಂಗಲದ ಜಕ್ಕಸಂದ್ರದಲ್ಲಿ ನಂಬಿಕಸ್ಥ ಕೆಲಸಗಾರನೊಬ್ಬನೇ ತನ್ನ ಯಜಮಾನರ ಮನೆಯಲ್ಲಿ ಕಳವು ಮಾಡಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.ಮಾರ್ಚ್ 1ರಂದು ಜಕ್ಕಸಂದ್ರದ ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ಕುಟುಂಬ ಸಮೇತ ಊಟಕ್ಕೆ ತೆರಳಿದ್ದಾಗ, ಮನೆಯ ಕಬೋರ್ಡ್‌ನಲ್ಲಿದ್ದ ಚಿನ್ನ, ವಜ್ರದ ಆಭರಣಗಳು ಹಾಗೂ ನಗದನ್ನು ಕೆಲಸಗಾರ ಕಳವು ಮಾಡಿದ್ದನು. ರಾತ್ರಿ ಕುಟುಂಬಸ್ಥರು ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದ್ದು, ಕೆಲಸಗಾರನ ಮೇಲೆ ಅನುಮಾನ ವ್ಯಕ್ತಪಡಿಸಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ನಡೆಸಿ ಕೃಷ್ಣ ಗಾರ್ಡನ್ ಲೇಔಟ್ ಬಳಿ ಆರೋಪಿಯನ್ನು ವಶಕ್ಕೆ ಪಡೆದರು. ವಿಚಾರಣೆಯ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈತ ಕಳವು ಮಾಡಿದ್ದ ಮಾಲನ್ನು ಯಲಹಂಕದಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ಮಾಹಿತಿ ನೀಡಿದ್ದನು.ಪೊಲೀಸರು ಆರೋಪಿಯಿಂದ ಒಟ್ಟು 172 ಗ್ರಾಂ ತೂಕದ ಚಿನ್ನ ಮತ್ತು ವಜ್ರದ ಆಭರಣಗಳು ಹಾಗೂ 48 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಅಂದಾಜು 25 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.
ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತ ಅವರ ಮಾರ್ಗದರ್ಶನದಲ್ಲಿ, ಎಸಿಪಿ ವಾಸುದೇವ್ಹಾಗೂ ಕೋರಮಂಗಲ ಇನ್ಸ್‌ಪೆಕ್ಟರ್ ಎಸ್.ಎಲ್.ಆರ್. ರೆಡ್ಡಿಅವರ ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.









