ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ಎಕ್ಸ್ಟೆಕ್ಷನ್ 3ನೇ ಮುಖ್ಯರಸ್ತೆಯಲ್ಲಿ
ವಾಸವಿರುವ ಪಿರಾದುದಾರರು, ದಿನಾಂಕ:23/09/2024 ರಂದು ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ದಿನಾಂಕ:21/09/2024 ರಂದು ರಾತ್ರಿ 10-00 ಗಂಟೆಯ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಮಂತ್ರಾಲಯಕ್ಕೆ ಹೋಗಿರುತ್ತಾರೆ. ದಿನಾಂಕ:22/09/2024 ರಂದು ರಾತ್ರಿ 11-30 ಗಂಟೆಗೆ ವಾಪಸ್ ಮನೆಗೆ ಬಂದು ನೋಡಲಾಗಿ, ಮನೆಯ ಮೈನ್ಡೋರ್ ಲಾಕ್ ಹಾಗೇ ಇದ್ದು, ಮನೆಯ 1ನೇ ಮಹಡಿಯ ಕಿಟಕಿಯ ಕಬ್ಬಿಣದ ಗ್ರಿಲ್ಗಳನ್ನು ಮೀಟಿ ಮನೆಯೊಳಗೆ ಪ್ರವೇಶಿಸಿ, ಕೊಠಡಿಯಲ್ಲಿದ್ದ ಕಬೋರ್ಡ್ನ ಡೋರನ್ನು ಸಹ ಮೀಟಿ ವಜ್ರದ ಆಭರಣಗಳು, ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳು ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಹಗಲು & ರಾತ್ರಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಮಾಹಿತಿಯನ್ನು ಕಲೆಹಾಕಿ, ದಿನಾಂಕ:23/09/2024 ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ ವ್ಯಕ್ತಿಯು ಆತನ ಕುಟುಂಬ ಸಮೇತ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ವಾಪಸ್ ಬರುತ್ತಿರುವಾಗ, ತುಮಕೂರು ಜಲ್ಲೆ, ಸಿರಾ ತಾಲ್ಲೂಕು, ಹುಳಿಯಾರು ಗ್ರಾಮದ ಬಳಿ ಆತನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರೆ ಮೂವರು ಸಹಚರರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ.
ಆರೋಪಿತನು ನೀಡಿದ ಮಾಹಿತಿ ಮೇರೆಗೆ, ದಿನಾಂಕ:24/09/2024 ರಂದು ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಉಲುವತ್ತಿ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳನ್ನು ಅವರುಗಳು ವಾಸವಿದ್ದ ಮನೆಯಿಂದ ವಶಕ್ಕೆ ಪಡೆದುಕೊಳ್ಳಲಾಯಿತು. ಈ ಇಬ್ಬರು ಆರೋಪಿಗಳ ಪೈಕಿ ಓರ್ವ ಆರೋಪಿತನ ಮನೆಯಿಂದ 18,000/- ನಗದು ಹಣವನ್ನು ಸಹ ವಶಪಡಿಸಿಕೊಳ್ಳಲಾಯಿತು. ಈ ಇಬ್ಬರು ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ.
ದಿನಾಂಕ:25/09/2024 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 2 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಮೂವರು ಆರೋಪಿಗಳ ಪೈಕಿ ಧರ್ಮಸ್ಥಳದಿಂದ ವಾಪಸ್ ಆಗುತ್ತಿದ್ದ ಆರೋಪಿಯ ಮನೆಯಿಂದ, ಈ ಪ್ರಕರಣದಲ್ಲಿ ಕಳವು ಮಾಡಿದ್ದ 1 ಕೆ.ಜಿ 802 ಗ್ರಾಂ ತೂಕದ ಚಿನ್ನಾಭರಣಗಳು, ವಜ್ರದ ಆಭರಣಗಳು, 110 ಗ್ರಾಂ ತೂಕದ ಬೆಳ್ಳಿ ಚೈನುಗಳು, 8-ವಾಚುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ -ಕಬ್ಬಿಣದ ರಾಡು, 1-ಹೆಲೈಟ್ನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 1,09,20,000 (ಒಂದು ಕೋಟಿ ಒಂಬತ್ತು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ).
ದಿನಾಂಕ:27/09/2024 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯು ತಲೆ ಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಸೈದುಲು ಅಡಾವತ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀ ಹೆಚ್. ಕೃಷ್ಣಮೂರ್ತಿ, ಎಸಿಪಿ ಮಲ್ಲೇಶ್ವರಂ ಉಪ ವಿಭಾಗ ಮತ್ತು ಶ್ರೀ ಸುರೇಶ ಹೆಚ್.ವಿ., ಪೊಲೀಸ್ ಇನ್ಸ್ಪೆಕ್ಟರ್, ಸುಬ್ರಮಣ್ಯನಗರ ಪೊಲೀಸ್ ಠಾಣೆ ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









