ಬೆಂಗಳೂರು: ಸಿದ್ದಾಪುರ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ, ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಹೊರ ರಾಜ್ಯದ ನಾಲ್ವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 750 ಕೆ.ಜಿ ತೂಕದ ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 1 ಕೋಟಿ 12 ಲಕ್ಷ ಎಂದು ಅಂದಾಜಿಸಲಾಗಿದೆ.
ಘಟನೆಯ ವಿವರ: ದಿನಾಂಕ 15/10/2025ರ ರಾತ್ರಿ ದೊರೆತ ಖಚಿತ ಮಾಹಿತಿಯ ಮೇರೆಗೆ, ಪೊಲೀಸರು ಸೋಮೇಶ್ವರನಗರ ಆರ್ಚ್ ಬಳಿ ನಿಂತಿದ್ದ ದೆಹಲಿ ನೋಂದಣಿಯ ಮಹೀಂದ್ರಾ ಎಕ್ಸ್ಯುವಿ ಕಾರ್ ಮತ್ತು ಆಂಧ್ರಪ್ರದೇಶ ನೋಂದಣಿಯ ಮಹೇಂದ್ರ ಬುಲೆರೋ ವಾಹನಗಳ ಮೇಲೆ ದಾಳಿ ನಡೆಸಿದರು. ಬುಲೆರೋ ವಾಹನದಲ್ಲಿ ಈರುಳ್ಳಿ ಮೂಟೆಗಳ ಕೆಳಗೆ ಅಡಗಿಸಿಟ್ಟಿದ್ದ ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ.
ಕಾರ್ಯಾಚರಣೆ: ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದಾಗ, ಅವರು ಶ್ರೀಗಂಧವನ್ನು ಅಕ್ರಮವಾಗಿ ಮಾರಾಟ ಮಾಡಲು ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಅಭಿರಕ್ಷೆಗೆ ಪಡೆದು, ಸಮಗ್ರ ತನಿಖೆ ನಡೆಸಲಾಗಿದೆ.

ವಶಪಡಿಸಿಕೊಂಡ ವಸ್ತುಗಳು:
- 750 ಕೆ.ಜಿ ಶ್ರೀಗಂಧದ ಮರದ ತುಂಡುಗಳು.
- ಕೃತ್ಯಕ್ಕೆ ಬಳಸಿದ 01 ಮಹೀಂದ್ರಾ ಎಕ್ಸ್ಯುವಿ ಕಾರ್ ಮತ್ತು 01 ಮಹೇಂದ್ರ ಬುಲೆರೋ ವಾಹನ.
ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ದಿನಾಂಕ 23/10/2025 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ತಂಡಕ್ಕೆ ಶ್ಲಾಘನೆ: ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ.ಲೊಕೇಶ್.ಬಿ ಜಗಲಾಸರ್, ಐ.ಪಿ.ಎಸ್ ಮತ್ತು ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ನಾರಾಯಣಸ್ವಾಮಿ. ವಿ ಅವರ ಮಾರ್ಗದರ್ಶನದಲ್ಲಿ, ಸಿದ್ದಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ.ಮೊಹನ್.ಡಿ.ಪಟೇಲ್ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಈ ಪ್ರಮುಖ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.










