ಸಿದ್ದಾಪುರ ಪೊಲೀಸರು ಬಹು ಅಪರಾಧ ಪ್ರಕರಣದ ಖತರ್ನಾಕ್ ಕಳ್ಳ ಜೋಡಿಯನ್ನು ಬಂಧಿಸಿದ್ದಾರೆ. ಇವರುಗಳಿಂದ 20 ಲಕ್ಷ ಮೌಲ್ಯಯುತ ವಸ್ತುಗಳ ಜಪ್ತಿ ಕಾರ್ಯವು ನಡೆದಿದೆ.
ಅಂದಹಾಗೆ ಸಿದ್ದಾಪುರ ಠಾಣಾ ಸರಹದ್ದಿನ 2ನೇ ಹಂತದಲ್ಲಿನ ಕನಕನಪಾಳ್ಯದ ವೃತ್ತಿಪರ ಮನೆ ಕೆಲಸದವರ ಮನೆಯಲ್ಲಿ ಹಗಲು ಕಳ್ಳತನ ಪ್ರಕರಣ ದಾಖಲಾಗಿತ್ತು. ತ್ವರಿತ ತನಿಖೆಯಿಂದಾಗಿ ಜಯನಗರದ ದಯಾನಂದ ನಗರ ಸ್ಲಂಬಳಿ ಓರ್ವ ವ್ಯಕ್ತಿಯನ್ನು ಹಿಡಿತಕ್ಕೆ ಪಡೆಯಲಾಯಿತು. ವಿಚಾರಣೆಯಲ್ಲಿ ಆರೋಪಿಯು ಬಾಯಿಬಿಟ್ಟಿತ್ತು ಸ್ಪೋಟಕ ಸತ್ಯ ಮಾಲೆಗಳನ್ನು..
ಆರೋಪಿಯು ಮತ್ತೋರ್ವ ಸಹಚರನ ಬಗ್ಗೆ ತಿಳಿಸಿದ್ದು, ಇವರಿಬ್ಬರು ಸೇರಿ 4 ದ್ವಿಚಕ್ರ ವಾಹನ ಮತ್ತು 5 ಮೊಬೈಲ್ ಫೋನ್ಸ್ ಸುಲಿಗೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ಅದೇ ದಿನ ಆರೋಪಿಯ ಬಳಿಯಲ್ಲಿದ್ದ 4 ಗ್ರಾಂ ಚಿನ್ನದ ಉಂಗುರವನ್ನು ಪೊಲೀಸರು ವಶಕ್ಕೆ ಪಡೆದರು.
ಇನ್ನು ಆರೋಪಿಯ ಮಾಹಿತಿ ಮೇರೆಗೆ ಹೊಸೂರು ರಸ್ತೆಯ ಡೈರಿ ಸರ್ಕಲ್ ಬಳಿ ದ್ವಿಚಕ್ರ ವಾಹನ ಮತ್ತು 5 ಮೊಬೈಲ್ ಫೋನ್ಗಳ ಸಮೇತ ಮತ್ತೋರ್ವ ಆರೋಪಿ ಬಲೆಗೆ ಬಿದ್ದಿದ್ದಾನೆ. ಠಾಣಾ ಸರಹದ್ದಿನಲ್ಲಿ ಕದ್ದ ವಿವಿಧ ಆಭರಣಗಳ ಪೈಕಿ ಸ್ವಲ್ಪ ಪ್ರಮಾಣವನ್ನು ತಿಲಕ್ ನಗರದ ಮುತ್ತೂಟ್ ಫೈನಾನ್ಸ್ ನಲ್ಲಿ ಮಾರಾಟ ಮಾಡಲಾಗಿದ್ದು, 16 ಗ್ರಾಮ್ ಚಿನ್ನಾಭರಣವನ್ನು ಹಿಂದಕ್ಕೆ ಪಡೆಯಲಾಗಿದೆ.
ಇದಷ್ಟೇ ಅಲ್ಲದೆ ಆರೋಪಿಯ ವಾಸಿತ ಮನೆಯಿಂದ ಚಿನ್ನಾಭರಣ, ಇಂದಿರಾಗಾಂಧಿ ಆಸ್ಪತ್ರೆಯ ಪಾರ್ಕಿಂಗ್, ನಿಮ್ಹಾನ್ಸ್ ಆಸ್ಪತ್ರೆಯ ಪಾರ್ಕಿಂಗ್ ಮತ್ತು ಲಾಲ್ಬಾಗ್ ಪಾರ್ಕಿಂಗ್ ಸ್ಥಳಗಳಿಂದ ಒಟ್ಟಾರೆ 4 ದ್ವಿಚಕ್ರಗಳು ಪೊಲೀಸರ ಅಭಿರಕ್ಷೆಗೆ ಬಂದಿದೆ. ಒಟ್ಟಾಗಿ 20 ಲಕ್ಷ ಮೌಲ್ಯಯುತ 170 ಗ್ರಾಂ ಚಿನ್ನ, 570 ಗ್ರಾಂ ಬೆಳ್ಳಿ, 5 ಮೊಬೈಲ್ ಫೋನ್ ಮತ್ತು 4 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳಿಂದ ಸಿದ್ದಾಪುರ ಠಾಣೆಯ 3 ಮನೆ ಕಳುವು, 1 ಸರಕಳವು ಮತ್ತು 1 ದ್ವಿಚಕ್ರ ಕಳುವು ಪ್ರಕರಣಗಳು ಪತ್ತೆಯಾಗಿವೆ. ಆಡುಗೋಡಿ ಠಾಣೆಯ ಮನೆಗಳ್ಳತನದ ಜೊತೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮತ್ತು ಹಲಸೂರು ಗೇಟ್ ಠಾಣೆಯ ತಲಾ 1 ದ್ವಿಚಕ್ರ ವಾಹನ ಕಳುವು ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳು ಪತ್ತೆಯಾಗಿದೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್.ಬಿ ಜಗಲಾಸರ್, ಐಪಿಎಸ್ ಮತ್ತು ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ನಾರಾಯಣಸ್ವಾಮಿ ವಿ ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಮೋಹನ್.ಡಿ ಪಟೇಲ್ ಮತ್ತವರ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









