https://youtube.com/shorts/_KOZPDcKh28
160 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ ಬೆಳ್ಳಿಯ ವಸ್ತುಗಳ ವಶ. ಮೌಲ್ಯ 12 ಲಕ್ಷ
ಅಮೃತಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ವೆಂಕಟೇಗೌಡ ಲೇಔಟ್‌ನಲ್ಲಿ ವಾಸವಿರುವ ಪಿರಾದುದಾರರು ODO:28/02/2024 ರಂದು ಅಮೃತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:25/02/2024 ರಂದು ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೋಗಿದ್ದು, ದಿನಾಂಕ:28/02/2024 ರಂದು ವಾಪಸ್ ಮನೆಗೆ ಬಂದು ನೋಡಲಾಗಿ, ಯಾರೋ ಅಪರಿಚಿತ ಕಳ್ಳರು ಮನೆಯ ಮುಂಬಾಗಿಲಿನ ಬೀಗ ಮುರಿದು, ಒಳ ಪ್ರವೇಶ ಮಾಡಿ, ಮನೆಯ ಕೊಠಡಿಯಲ್ಲಿದ್ದ ಕರ್ಬೋಡ್ ಮತ್ತು ಬೀರುನಲ್ಲಿಟ್ಟಿದ್ದ ಚಿನ್ನದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಮಾಹಿತಿಯನ್ನು ಕಲೆಹಾಕಿ, ದಿನಾಂಕ:11/10/2024 ರಂದು ಕೆಂಪಾಪುರ ಮುಖ್ಯರಸ್ತೆಯಲ್ಲಿ ಓರ್ವ ವ್ಯಕ್ತಿಯನ್ನು 4 ಗ್ರಾಂ ಚಿನ್ನದ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಚಿನ್ನದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ಆರೋಪಿಯು ರಾಮಮೂರ್ತಿನಗರ, ಬಾಣಸವಾಡಿ, ಕೆ.ಆರ್.ಪುರಂ, ಮತ್ತು ಮಹದೇವಪುರ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ದಸ್ತಗಿರಿಯಾಗಿ, ಜೈಲಿಗೆ ಹೋಗಿದ್ದು, 2023ನೇ ಸಾಲಿನ ಡಿಸೆಂಬರ್ ಮಾಹೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಎಂ.ಓ ವ್ಯಕ್ತಿಯಾಗಿರುತ್ತಾನೆ.
ಆರೋಪಿಯು ಅಮೃತ್‌ಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಮೂರು ಮನೆಗಳ್ಳತನ ಮಾಡಿ, ಕಳವು ಮಾಡಿದ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ವಿವೇಕ್ ನಗರ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ಬ್ಯಾಡರಹಳ್ಳಿಯಲ್ಲಿರುವ ಜ್ಯೂವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದು ಹಾಗೂ ತಮಿಳುನಾಡಿನಲ್ಲಿರುವ ಆರೋಪಿಯ ಸ್ನೇಹಿತನಿಗೂ ಸಹ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:12/10/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಿ, ಆರೋಪಿಯು ಮಾರಾಟ ಮಾಡಿದ್ದ ಜ್ಯೂವೆಲರಿ ಶಾಪ್‌ನ ಮಾಲೀಕರುಗಳಿಗೆ ನೋಟಿಸ್‌ನ್ನು ನೀಡಿ, ಹಾಗೂ ಆರೋಪಿಯ ಸ್ನೇಹಿತನಿಗೂ ಸಹ ನೋಟಿಸ್ ನೀಡಲಾಗಿರುತ್ತದೆ.
ದಿನಾಂಕ:14/10/2024 ರಂದು ಆರೋಪಿಯ ಸ್ನೇಹಿತನು ಹಾಗೂ ವಿವಿಧ ಜ್ಯೂವೆಲರಿ ಅಂಗಡಿಗಳ ಮಾಲೀಕರು ಹಾಜರುಪಡಿಸಿದ 160 ಗ್ರಾಂ ಚಿನ್ನದ ಆಭರಣಗಳು ಹಾಗೂ 1 ಕೆ.ಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 12,00,000/- (ಹನ್ನೆರಡು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಯ ಬಂಧನದಿಂದ, ಅಮೃತ್‌ಹಳ್ಳಿ ಪೊಲೀಸ್ ಠಾಣೆಯ-03 ಮನೆ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ದಿನಾಂಕ:16/10/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ.ಸಜೀತ್. ಐ.ಪಿ.ಎಸ್ಮತ್ತು ಸಂಪಿಗೆಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮುರುಗೇಂದ್ರಯ್ಯ ರವರು ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಅಂಬರೀಶ್.ಎಂ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









