ಮನೆಯ ಮುಂದೆ ನಿಂತಿದ್ದ ವೃದ್ಧೆಯ ಗಮನ ಹರಿಸಿ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಪ್ರಕರಣದ ಭೇದನೆ.ಬೆಂಗಳೂರಿನ ಹೆಬ್ಬಾಳ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಿರಾತಕರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 9.24 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸ್ವತ್ತು: 64.66 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ.
ಒಟ್ಟು ಮೌಲ್ಯ: ಸುಮಾರು 9,24,000/-.
ಪತ್ತೆಯಾದ ಪ್ರಕರಣಗಳು: ಈ ಬಂಧನದಿಂದ ಹೆಬ್ಬಾಳ ಮತ್ತು ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಗಳ ತಲಾ ಒಂದು ಸರಗಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 2 ಪ್ರಕರಣಗಳು ಪತ್ತೆಯಾಗಿವೆ.
ಕಳೆದ ಜನವರಿ 27 ರಂದು ಹೆಬ್ಬಾಳದ ಮುನೇಶ್ವರ ದೇವಸ್ಥಾನದ ಬಳಿ ವೃದ್ಧೆಯೊಬ್ಬರು ತಮ್ಮ ಮೊಮ್ಮಗಳನ್ನು ಎತ್ತಿಕೊಂಡು ಮನೆಯ ಮುಂದೆ ನಿಂತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು “ಬಾಡಿಗೆಗೆ ಮನೆ ಇದೆಯೇ?” ಎಂದು ವಿಚಾರಿಸುವ ನೆಪದಲ್ಲಿ ಮಾತುಕ್ಕಿಳಿದು, ಏಕಾಏಕಿ ಅವರ ಕೊರಳಲ್ಲಿದ್ದ 58.43 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಘಟನೆ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಇನ್ಸ್‌ಪೆಕ್ಟರ್ ಭೈರ ಅವರ ನೇತೃತ್ವದ ತಂಡ, ಫೆಬ್ರವರಿ 5 ರಂದು ಕನಕಪುರ ಮತ್ತು ಜೆ.ಜೆ. ನಗರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು ದೋಚಿದ್ದ ಚಿನ್ನವನ್ನು ಜೆ.ಪಿ. ನಗರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಅಡಮಾನ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಕಾರ್ಯಾಚರಣೆಯನ್ನು ಶ್ರೀ.ಬಿ.ಎಸ್.ನೇಮಗೌಡ ಐ.ಪಿ.ಎಸ್, ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ, ಶ್ರೀ. ಕೆ.ಎಸ್ ತನ್ನೀರ್, ಸಹಾಯಕ ಪೊಲೀಸ್ ಆಯುಕ್ತರು, ಜೆ.ಸಿ ನಗರ ಉಪ ವಿಭಾಗ ರವರ ನೇತೃತ್ವದಲ್ಲಿ, ಹೆಬ್ಬಾಳ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಭೈರ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.








