2 ದೇಶಿಯ ನಿರ್ಮಿತ ಪಿಸ್ತೂಲ್ಗಳು, 4 ಜೀವಂತ ಮದ್ದು ಗುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ 1-ದ್ವಿಚಕ ವಾಹನ ವಶ. ಮೌಲ್ಯ 5 ಲಕ್ಷ.
ಹುಳಿಮಾವು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ದಿನಾಂಕ:20/11/2024 ರಂದು ಠಾಣಾ ಸರಹದ್ದಿನ ಎಲೇನಹಳ್ಳಿ, ಕೊಪ್ಪ-ಬೇಗೂರು ರಸ್ತೆಯ ನೈಸ್ ರೋಡ್ ಬ್ರಿಡ್ಜ್ ಹತ್ತಿರ ವಾಹನ ತಪಾಸಣೆ ಮಾಡುತ್ತಿರುವಾಗ ರಾತ್ರಿ 08.30 ಗಂಟೆ ಸಮಯದಲ್ಲಿ ದ್ವಿ-ಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳನ್ನು ತಡೆದು ದ್ವಿ-ಚಕ್ರ ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಕೇಳಲಾಗಿ, ದ್ವಿ-ಚಕ್ರ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ. ದ್ವಿ-ಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಓರ್ವ ವ್ಯಕ್ತಿಯ ಬಳಿ ಇದ್ದ ಬ್ಯಾಗಿನ ಬಗ್ಗೆ ಪ್ರಶ್ನಿಸಲಾಗಿ, ಆ ಇಬ್ಬರು ವ್ಯಕ್ತಿಗಳು ಓಡಿಹೋಗಲು ಪ್ರಯತ್ನಿಸಿದರು. ಅವರಿಬ್ಬರನ್ನು ಪೊಲೀಸರು ಹಿಡಿದು ಬ್ಯಾಗನ್ನು ಪರಿಶೀಲಿಸಿದಾಗ, ಬ್ಯಾಗ್ನಲ್ಲಿ 2 ದೇಶಿಯ ನಿರ್ಮಿತ ಪಿಸ್ತೂಲ್, 4 ಜೀವಂತ ಮದ್ದು ಗುಂಡುಗಳು ಇರುವುದು ಕಂಡು ಬಂದಿದ್ದು, ತಕ್ಷಣ ಅವರಿಬ್ಬರನ್ನು ವಶಕ್ಕೆ ಪಡೆದುಕೊಂಡು, ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು, ಅವರುಗಳ ಸಮಾಕ್ಷಮ ಇಬ್ಬರು ವ್ಯಕ್ತಿಗಳು ಹೊಂದಿದ್ದ 2 ದೇಶಿಯ ನಿರ್ಮಿತ ಪಿಸ್ತೂಲ್, 4 ಜೀವಂತ ಮದ್ದು ಗುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ | ದ್ವಿ-ಚಕ್ರ ವಾಹನವನ್ನು ಪಂಚನಾಮೆಯ ಮುಖಾಂತರ ವಶಪಡಿಸಿಕೊಳ್ಳಲಾಯಿತು. ವಶಪಡಿಸಿಕೊಂಡ ವಸ್ತುಗಳ ಮೌಲ್ಯ 5,00,000/-(ಐದು ಲಕ್ಷ ರೂಪಾಯಿ). ಇಬ್ಬರು ವ್ಯಕ್ತಿಗಳನ್ನು ಹಾಗೂ ಪಂಚನಾಮೆಯಲ್ಲಿ ಅಮಾನತ್ತು ಪಡಿಸಿದ ವಸ್ತುಗಳ ಸಮೇತ ಠಾಣೆಗೆ ಕರೆತಂದು ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ದಿನಾಂಕ:21/11/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 5 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು ಬಿಹಾರ್ ರಾಜ್ಯ ದಿಂದ ದೇಶಿಯ ನಿರ್ಮಿತ ಪಿಸ್ತೂಲ್ ಹಾಗೂ ಜೀವಂತ ಮದ್ದು ಗುಂಡುಗಳನ್ನು ತಂದಿರುವುದಾಗಿ ಹಾಗೂ ಅಕ್ರಮವಾಗಿ ಸಾಗಾಣಿಕೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಇಬ್ಬರು ಆರೋಪಿಗಳಿಂದ ಯಾವುದೇ ಉಪಯುಕ್ತ ಮಾಹಿತಿ ದೊರೆಯದ ದಿನಾಂಕ:25/11/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಆತ್ಮೀಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಸಾರಾ ಫಾತಿಮಾ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ಕೆ.ಎಂ ಸತೀಶರವರ ಉಸ್ತುವಾರಿಯಲ್ಲಿ ಹುಳಿಮಾವು ಪೊಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಬಿ.ಜಿ.ಕುಮಾರಸ್ವಾಮಿ ರವರ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.











