ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ಪಿರಾದುದಾರರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ:15/11/2024 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಮೇಕಪ್ ಆರ್ಟಿಸ್ಟ್ ಕೆಲಸ ನಿರ್ವಹಿಸುತ್ತಿದ್ದು, ವಿವಿಧ ಕಡೆಗಳಲ್ಲಿ ಕೆಲಸ ಮಾಡುವ ಸಲುವಾಗಿ ಹೊರಗೆ ಹೋಗುತ್ತಿರುತ್ತಾರೆ. ದಿನಾಂಕ:29/10/2024 ರಂದು ಪಿರಾದುದಾರರು ಹೊಂದಿದ್ದ ಚಿನ್ನಾಭರಣಗಳನ್ನು ಕೊಠಡಿಯ ಬೀರುವಿನಲ್ಲಿಟ್ಟಿದ್ದು, ನಂತರ ದಿನಾಂಕ:13/11/2024 ರಂದು ಚಿನ್ನಾಭರಣಗಳನ್ನು ನೋಡಲಾಗಿ, ಚಿನ್ನಾಭರಣಗಳು ಬೀರುವಿನಲ್ಲಿ ಇಲ್ಲದಿರುವುದನ್ನು ಕಂಡು ಮನೆಯ ಕೆಲಸದಾಕೆಯ ಮೇಲೆ ಅನುಮಾನವಿರುವುದಾಗಿ ಹಾಗೂ ಕೆಲಸದಾಕೆಯು ಪಿರಾದುದಾರರ ಮನೆಯಲ್ಲಿಯೇ ಪ್ರತ್ಯೇಕವಾಗಿ ಕೊಠಡಿಯನ್ನು ನೀಡಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ತನಿಖೆಯನ್ನು ಕೈಗೊಂಡ ಪೊಲೀಸರು,
ದಿನಾಂಕ:15/11/2024 ರಂದು ಪಿರಾದುದಾರರ ಮನೆಗೆ ಹೋಗಿ, ಪಿರಾದುದಾರರ ಮನೆಯಲ್ಲಿದ್ದ ಕೆಲಸದಾಕೆಯನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ. ಹಾಗೂ ಕಳವು ಮಾಡಿದ ಆಭರಣಗಳನ್ನು ಸಂಪಂಗಿರಾಮನಗರದಲ್ಲಿ ವಾಸವಾಗಿರುವ ಪರಿಚಯಸ್ಥ ಗಿರವಿ ಅಂಗಡಿಯ ಮಾಲೀಕನಿಗೆ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾಳೆ.
ದಿನಾಂಕ:15/11/2024 ರಂದು ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ಸ್ವೀಕರಿಸಿದ್ದ ಗಿರವಿ ಅಂಗಡಿಯ ಮಾಲೀಕನನ್ನು ವಿಚಾರಣೆ ಮಾಡಲಾಗಿ, ಆತನು ಆಭರಣಗಳನ್ನು ಖರೀದಿಸಿರುವುದಾಗಿ ತಿಳಿಸಿದ್ದು, ಆತನಿಂದ 229 ಗ್ರಾಂ ಚಿನ್ನಾಭರಣ, 21.41 ಗ್ರಾಂ ವಜ್ರದ ಆಭರಣ ಹಾಗೂ 37.28 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 25,00,000/-(ಇಪ್ಪತ್ತೈದು ಲಕ್ಷ ರೂಪಾಯಿ).
ದಿನಾಂಕ:15/11/2024 ರಂದು ಆರೋಪಿತೆಗೆ ಠಾಣೆಯಲ್ಲಿ ಬೆಲ್ ಮೇಲೆ ಬಿಡುಗಡೆ ಮಾಡಲಾಗಿರುತ್ತದೆ.

ಈ ಕಾರ್ಯಾಚರಣೆಯನ್ನು ಕೇಂದ್ರ ವಿಭಾಗದ ಉಪ ಪೊಲೀಸ್ ಕಮೀಷನರ್ ಶ್ರೀ. ಶೇಖರ್ ಹೆಚ್.ಟಿ ಐ.ಪಿ.ಎಸ್, ರವರ ಮಾರ್ಗದರ್ಶನದಲ್ಲಿ, ಕಬ್ಬನ್ಪಾರ್ಕ್ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ ಬಾಲಕೃಷ್ಣ ಸಿ ರವರ ನೇತೃತ್ವದಲ್ಲಿ ವಿವೇಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಅನಿಲ್ ಕುಮಾರ ಜಿ.ಎಸ್ ರವರ
ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.










