ಬೆಂಗಳೂರು ನಗರದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಇತ್ತೀಚೆಗೆ ಎರಡು ಪ್ರಮುಖ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ, ಎಂ.ಡಿ.ಎಂ.ಎ. ವಶ:
ಖಚಿತ ಮಾಹಿತಿ ಆಧರಿಸಿ, ಸಿಸಿಬಿ ಅಧಿಕಾರಿಗಳು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಇಬ್ಬರು ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಇವರು ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ. ಆರೋಪಿಗಳಿಂದ 1 ಕೆ.ಜಿ 47 ಗ್ರಾಂ ಮೌಲ್ಯದ ಎಂ.ಡಿ.ಎಂ.ಎ ಕ್ರಿಸ್ಟೆಲ್ ಮತ್ತು ಡ್ರಗ್ ಮಾರಾಟದಿಂದ ಬಂದ 42,800 ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಒಟ್ಟು ಮೌಲ್ಯ ಅಂದಾಜು 2,50,00,000(ಎರಡು ಕೋಟಿ ಐವತ್ತು ಲಕ್ಷ ರೂಪಾಯಿ) ಆಗಿದೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಥೈಲ್ಯಾಂಡ್‌ನಿಂದ ಬಂದ ಪಾರ್ಸೆಲ್‌ಗಳಲ್ಲಿ ಹೈಡೋ ಗಾಂಜಾ ವಶ:
ಕಸ್ಟಮ್ಸ್ ಇಲಾಖೆಯ ಸಹಕಾರದೊಂದಿಗೆ ಕೆ.ಜಿ. ನಗರದಲ್ಲಿರುವ ವಿದೇಶಿ ಅಂಚೆ ಕಛೇರಿಯಲ್ಲಿ ಸಿಸಿಬಿ ಮತ್ತೊಂದು ದಾಳಿ ನಡೆಸಿದೆ. ಅನುಮಾನಾಸ್ಪದ ವಿದೇಶಿ ಪಾರ್ಸೆಲ್‌ಗಳನ್ನು ಶ್ವಾನದಳದ ಸಹಾಯದಿಂದ ಪರಿಶೀಲಿಸಲಾಗಿದ್ದು, ವಿದೇಶಿ ಕಂಪನಿಯ ಬಿಸ್ಕೆಟ್ ಮತ್ತು ಚಾಕೊಲೇಟ್ ಪ್ಯಾಕೇಟ್‌ಗಳಲ್ಲಿ ಅಡಗಿಸಿ ಇಡಲಾಗಿದ್ದ 3 ಕೆ.ಜಿ ನಿಷೇಧಿತ ಹೈಡೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 3,00,00,000 (ಮೂರು ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಈ ಡ್ರಗ್ಸ್‌ಗಳು ಥೈಲ್ಯಾಂಡ್‌ನಿಂದ ಆಮದುಗೊಂಡಿರುವುದು ಕಂಡುಬಂದಿದೆ. ಕೆ.ಜಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ.
ಈ ಯಶಸ್ವಿ ಕಾರ್ಯಾಚರಣೆಗಳು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ, ಜಂಟಿ ಪೊಲೀಸ್ ಆಯುಕ್ತರು, ಅಪರಾಧ, ಮತ್ತು ಉಪ ಪೊಲೀಸ್ ಅಪರಾಧ-2 ರವರ ನೇತೃತ್ವದಲ್ಲಿ, ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಿಂದ ನಡೆದಿದೆ.










