ರಾಷ್ಟ್ರ ರಾಜಧಾನಿ ದೆಹಲಿಯ 40 ಖಾಸಗಿ ಶಾಲೆಗಳಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆಗಳು ಬಂದಿರುವುದು ಇಂದು ಬೆಳಕಿಗೆ ಬಂದಿದೆ.
ಸೋಮವಾರ ಬೆಳಗ್ಗೆ ದೆಹಲಿಯ ವಸಂತ್ ಕುಂಜ್ ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ಮತ್ತು ಆರ್ ಕೆ ಪುರಂನಲ್ಲಿರುವ ಐದು ಶಾಲೆಗಳು, ಪಶ್ಚಿಮ ವಿಹಾರ್ ನಲ್ಲಿರುವ ಜಿಡಿ ಗೋಯೆಂಕಾ ಶಾಲೆ ಮತ್ತು ಡೂನ್ ಪಬ್ಲಿಕ್ ಸ್ಕೂಲ್ ಮತ್ತು ಪಿತಾಂಪುರದ ಬ್ರಿಲಿಯಂಟ್ಸ್ ಕಾನ್ವೆಂಟ್ ಶಾಲೆಗಳಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಡಿಪಿಎಸ್ ಆರ್ ಕೆ ಪುರಂನಿಂದ ಬೆಳಗ್ಗೆ 7.06ಕ್ಕೆ ಮತ್ತು ಜಿಡಿ ಗೋಯೆಂಕಾ ಪಶ್ಚಿಮ ವಿಹಾರ್ ನಿಂದ ಬೆಳಗ್ಗೆ 6.15ಕ್ಕೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಕರೆಗಳು ಬಂದ ಬೆನ್ನಲ್ಲೇ ದೆಹಲಿ ಅಗ್ನಿಶಾಮಕ ಸೇವೆಯ (DFS) ತಂಡವು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ, ಡಿಎಫ್ ಎಸ್ ಸಿಬ್ಬಂದಿಯೊಂದಿಗೆ ಶಾಲೆಯ ಸಂಪೂರ್ಣ ಆವರಣವನ್ನು ಪರಿಶೀಲನೆ ನಡೆಸಲಾಯಿತು. ಸದ್ಯಕ್ಕೆ ಅನುಮಾನಾಸ್ಪದವಾಗಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನಾಮಧೇಯ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಂಡು ತರಗತಿಗೆ ಹಾಜರಾಗಲು ಬಂದ ವಿದ್ಯಾರ್ಥಿಗಳನ್ನು ಮನೆಗೆ ವಾಪಸ್ ಕಳುಹಿಸಿದೆ. ಮುಂಜಾಗ್ರತಾ ಕ್ರಮವಾಗಿ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಪೋಷಕರಿಗೆ ತಿಳಿಸಲಾಗಿದೆ.








