ಮೊಬೆಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ 02 ಕಾರ್‌ಗಳ ವಶ. ಒಟ್ಟು ಮೌಲ್ಯ 27 ಲಕ್ಷ.
ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರುಗಳಿಗೆ ದಿನಾಂಕ:09/04/2025 ರಂದು ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ಸರಹದ್ದಿನ ಅಟ್ಟೂರು ಲೇಔಟ್‌ನಲ್ಲಿರುವ ಲಾಡ್ಜ್‌ವೊಂದರಲ್ಲಿ ಕೇರಳ ರಾಜ್ಯದ 08 ಡ್ರಗ್ ಪೆಡ್ಲರ್‌ಗಳು ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟೆಲ್‌ನ್ನು ಮಾರಾಟ ಮಾಡುತಿರುವುದಾಗಿ ತಿಳಿಸಿರುತ್ತಾರೆ. ಈ ಮಾಹಿತಿಯನ್ನಾಧರಿಸಿ ಸಿಸಿಬಿ ಯ ಅಧಿಕಾರಿಗಳು ಬಾತ್ಮೀದಾರರ ತಿಳಿಸಿದ ಸ್ಥಳಕ್ಕೆ ಧಾವಿಸಿ, ದಾಳಿ ಮಾಡಿ 8 ಮಂದಿ ಡ್ರಗ್ ಪೆಡ್ಡರ್‌ಗಳನ್ನು ವಶಕ್ಕೆ ಪಡೆದು ಕೊಳ್ಳಲಾಯಿತು.

ವಶಕ್ಕೆ ಪಡೆದ ಡ್ರಗ್ ಪೆಡ್ಡರ್‌ಗಳನ್ನು ವಿಚಾರಣೆ ಮಾಡಲಾಗಿ, ಈ ಡ್ರಗ್ ಪೆಡ್ಡರ್‌ಗಳು ಮೂಲತಃ ಕೇರಳ ರಾಜ್ಯದವರಾಗಿದ್ದು, ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿರುತ್ತಾರೆ. ಮೋಜಿನ ಜೀವನ ನಡೆಸುವ ಸಲುವಾಗಿ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ನೆಲೆಸಿರುವ ವಿದೇಶಿ ಡ್ರಗ್ ಪೆಡ್ಡರ್‌ಗಳಿಂದ ಕಡಿಮೆ ಬೆಲೆಗೆ ಎಂ.ಡಿ.ಎಂ.ಎ ಕ್ರಿಸ್ಟಲ್ ಅನ್ನು ಖರೀದಿ ಮಾಡಿ, ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಒಂದು ಗ್ರಾಂ ಗೆ 15 ಸಾವಿರದಿಂದ 20 ಸಾವಿರ ರೂ ನಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದಾಗಿ ತಿಳಿಸಿರುತ್ತಾರೆ.
ಈ ಎಂಟು ಆರೋಪಿಗಳ ವಶದಲ್ಲಿದ್ದ ನಿಷೇಧಿತ ಮಾದಕ ವಸ್ತುವಾದ 110 ಗ್ರಾಂ ಎಂಡಿಎಂಎ ಕ್ರಿಸ್ಟಲ್. 10 ಮೊಬೈಲ್ ಫೋನ್‌ಗಳು, 01 ಟ್ಯಾಬ್, ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಕೃತ್ಯಕ್ಕೆ ಬಳಸಿಕೊಂಡಿದ್ದ 02 ಕಾರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ ₹27,00,000/-(ಇಪ್ಪತ್ತೇಳು ಲಕ್ಷ ರೂಪಾಯಿ).
ಎಂಟು ಆರೋಪಿತರು ಹಾಗೂ ವಶಪಡಿಸಿಕೊಂಡ ಎಂ.ಡಿ.ಎಂ.ಎ ಕ್ರಿಸ್ಟೆಲ್‌ಗಳ ಸಮೇತ ವರದಿಯೊಂದಿಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾಧಿಕಾರಿಯವರಿಗೆ ಒಪ್ಪಿಸಲಾಗಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿ.ಸಿ.ಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.









