ಬೆಂಗಳೂರಿನ ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ವಿದೇಶಿ ಡ್ರಗ್ ಪೆಡ್ಲರ್ ನಿಷೇದಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್‌ಗಳನ್ನು ಮಾರಾಟ/ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಮಾಹಿತಿಯ ಮೇರೆಗೆ ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿರವರುಗಳು ಬಾತ್ಮೀದಾರರು ತಿಳಿಸಿದ ಸ್ಥಳಕ್ಕೆ ಧಾವಿಸಿ, ದಾಳಿ ನಡೆಸಿ, ಓರ್ವ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಯ ವಶದಲ್ಲಿದ್ದ ನಿಷೇದಿತ ಮಾದಕ ವಸ್ತುವಾದ । ಕೆ.ಜಿ ಎಂ.ಡಿ.ಎಂ.ಎ ಕ್ರಿಸ್ಟಲ್ ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, ಒಂದು ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿಕೊಂಡಿದ್ದ ಒಂದು ದ್ವಿ-ಚಕ್ರ ವಾಹನ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿರುತ್ತದೆ. ಇವುಗಳ ಒಟ್ಟು ಮೌಲ್ಯ 2,00.00.000/-(ಎರಡು ಕೋಟಿ ರೂಪಾಯಿ).
ವಶಕ್ಕೆ ಪಡೆದ ವಿದೇಶಿ ಆರೋಪಿಯು, 2012ನೇ ಸಾಲಿನಲ್ಲಿ ಬಿಜಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಮೋಜಿನ ಜೀವನ ನಡೆಸುವ ಸಲುವಾಗಿ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಆತನ ಪರಿಚಯಸ್ಥನಿಂದ ನಿಷೇದಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅವುಗಳನ್ನು ಒಂದು ಗ್ರಾಂ ಗೆ ₹ 20 ಸಾವಿರದಂತೆ ಹೆಚ್ಚಿನ ಬೆಲೆಗೆ ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಹಾಗೂ ಆರೋಪಿತನು ನಕಲಿ ದಾಖಲೆ ಸೃಷ್ಟಿಸಿಕೊಂಡು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಕುರಿತು ಎಫ್.ಆರ್.ಆರ್.ಓ ಕಚೇರಿಗೆ ಪತ್ರ ವ್ಯವಹಾರ ಮಾಡಲಾಗಿರುತ್ತದೆ.
ಆರೋಪಿತನು ಹಾಗೂ ವಶಪಡಿಸಿಕೊಂಡ ಎಂ.ಡಿ.ಎಂ.ಎ ಕ್ರಿಸ್ಟೆಲ್‌ಗಳ ಸಮೇತ ವರದಿಯೊಂದಿಗೆ ಬೇಗೂರು ಪೊಲೀಸ್ ಠಾಣಾಧಿಕಾರಿಯವರಿಗೆ ಒಪ್ಪಿಸಲಾಗಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿ.ಸಿ.ಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.









