ಬೆಂಗಳೂರು ನಗರದ ವಾಯುವ್ಯ ವಿಭಾಗದ ಮಾದನಾಯಕನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ದಾಸನಪುರದಲ್ಲಿ ಜ್ಯುವೆಲರಿ ಅಂಗಡಿಯೊಂದನ್ನು ಸುಲಿಗೆ ಮಾಡಿದ್ದ ಹೊರ ರಾಜ್ಯದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಶಪಡಿಸಿಕೊಂಡ ಸ್ವತ್ತು: ಒಂದು ಪಿಸ್ತೂಲ್, 2 ಜೀವಂತ ಗುಂಡುಗಳು, 3 ಮ್ಯಾಗ್‌ಜಿನ್, 9.1 ಗ್ರಾಂ ಚಿನ್ನಾಭರಣ, 4 ಮೊಬೈಲ್ ಫೋನ್‌ಗಳು ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ.
ಒಟ್ಟು ಮೌಲ್ಯ: ಸುಮಾರು 2.50 ಲಕ್ಷ.
ಕೃತ್ಯದ ವೇಳೆ ಆರೋಪಿಗಳು ಅಂಗಡಿಯಲ್ಲೇ ಬಿಟ್ಟು ಹೋಗಿದ್ದ ಒಂದು ಮೊಬೈಲ್ ಫೋನ್ ಪೊಲೀಸರಿಗೆ ಪ್ರಮುಖ ಸುಳಿವು ನೀಡಿತು. ಇದರ ಆಧಾರದ ಮೇಲೆ ಕೊತ್ತನೂರು, ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ರಾಜಸ್ಥಾನದ ಜೋಧ್‌ಪುರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.
ಕಳೆದ ಜನವರಿ 27 ರಂದು ದಾಸನಪುರದ ಜ್ಯುವೆಲರಿ ಅಂಗಡಿಯಲ್ಲಿ ಮಾಲೀಕರ ಮಕ್ಕಳಿದ್ದಾಗ ಗ್ರಾಹಕರಂತೆ ಬಂದ ದುಷ್ಕರ್ಮಿಗಳು, ಏಕಾಏಕಿ ಪಿಸ್ತೂಲ್ ತೋರಿಸಿ ಹೆದರಿಸಿದ್ದರು. ಅಂಗಡಿಯಲ್ಲಿದ್ದ ಚಿನ್ನದ ಕಿವಿರಿಂಗ್, ಮೂಗೂತಿ ಹಾಗೂ 50 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದರು.
ಈ ಕಾರ್ಯಾಚರಣೆಯನ್ನು ಶ್ರೀ ಡಿ.ಎಲ್.ನಾಗೇಶ್ ಐ.ಪಿ.ಎಸ್, ಉಪ ಪೊಲೀಸ್ ಆಯುಕ್ತರು ವಾಯುವ್ಯ ವಿಭಾಗ ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ, ಶ್ರೀ ಅಶೋಕ್.ಎಂ.ಎಸ್. ಸಹಾಯಕ ಪೊಲೀಸ್ ಆಯುಕ್ತರು ಪೀಣ್ಯಾ ಉಪ ವಿಭಾಗ ರವರ ನೇತೃತ್ವದಲ್ಲಿ, ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಮುರಳಿಧರ, ಎಂ.ಕೆ ಮತ್ತು ಇತರೆ ಅಧಿಕಾರಿ ಮತ್ತು ಸಿಬ್ಬಂದಿ ರವರುಗಳು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









