ಮಹದೇವಪುರ ಆರಕ್ಷಕರು ಬೆಂಗಳೂರಿನಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಮೂರು ಆರೋಪಿಗಳಿಂದ ಕಳುವು ಮಾಡಿದ ಬೃಹತ್ ಮೌಲ್ಯದ 25 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಠಾಣಾ ವ್ಯಾಪ್ತಿಯ ಉದಯನಗರದ ಕಳುವು ಪ್ರಕರಣದಲ್ಲಿ ತನಿಖೆಗೆಂದು ಅಖಾಡಕ್ಕೆ ಇಳಿದಾಗ ಈ ಭಾರಿ ಖದೀಮರ ಗ್ಯಾಂಗ್ ಪತ್ತೆಯಾಗಿದೆ.
ಮೊದಲು ವೈಟ್ಫೀಲ್ಡ್ ಠಾಣಾ ಸರಹದ್ದಿನ ಓ ಫಾರಂ ರಸ್ತೆಯಲ್ಲಿ ಕಳುವಾಗಿದ್ದ ದ್ವಿಚಕ್ರದ ಸಮೇತ ಇಬ್ಬರು ವಶಕ್ಕೆ ಬಿದ್ದರು. ಪೊಲೀಸರ ಅಭಿರಕ್ಷೆಯಿಂದ ಮತ್ತೊಬ್ಬ ಕಳ್ಳ ಸಿಕ್ಕಿಬಿದ್ದಿದ್ದಾನೆ. ಹಾವೇರಿಯ ಖ ರ್ಜಗಿ ಗ್ರಾಮದ ವ್ಯಕ್ತಿಯೋರ್ವನು ಕದ್ದ ಹನ್ನೆರಡು ವಾಹನಗಳನ್ನು ಖರೀದಿಸಿದ್ದು, ಅವುಗಳನ್ನೂ ಕಬ್ಜೆಗೆ ಪಡೆಯಲಾಯಿತು. ಇನ್ನುಳಿದ 12 ದ್ವಿಚಕ್ರಗಳನ್ನು ಸಿಂಗಯ್ಯನಪಾಳ್ಯ ರೈಲ್ವೆ ಪ್ಯಾರಲರ್ ರಸ್ತೆ ಪಕ್ಕದ ಖಾಲಿ ಜಾಗ ಮತ್ತು ಡೀಸೆಲ್ ಶೆಡ್ ರೈಲ್ವೆ ಪ್ಯಾರಲಲ್ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದರು.
ಈ ಪ್ರಕರಣದ ಆರೋಪಿಗಳ ಬಂಧನದಿಂದ ಮಹದೇವಪುರ ಪೊಲೀಸ್ ಠಾಣೆಯ 6 ದ್ವಿಚಕ್ರ ವಾಹನ ಪ್ರಕರಣ, ಹೆಚ್ಎಸ್ಆರ್ ಲೇಔಟ್ ಠಾಣೆಯ 3 ದ್ವಿಚಕ್ರ ವಾಹನ ಮತ್ತು ವೈಟ್ ಫೀಲ್ಡ್ ಠಾಣೆಯ 2 ದ್ವಿಚಕ್ರ ಕಳುವು ಪ್ರಕರಣ ಪತ್ತೆಯಾಗಿವೆ. ಇದಿಷ್ಟೇ ಅಲ್ಲದೆ ಹೆಚ್ ಎಲ್ ಎ, ಸುಬ್ರಮಣ್ಯ ನಗರ, ಆನೇಕಲ್, ವರ್ತೂರು, ಗೋವಿಂದಪುರ, ಕುಮಾರಸ್ವಾಮಿ ಲೇಔಟ್, ಜೆಪಿ ನಗರ, ಆವಲಹಳ್ಳಿ, ಬಾಗಲೂರು, ಮಾರತಹಳ್ಳಿ, ಮೈಸೂರು ನಗರ ಪೊಲೀಸ್ ಠಾಣೆಯ ತಲಾ 1 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಿಂದ ಒಟ್ಟು 35 ಲಕ್ಷ ಮೌಲ್ಯದ 25 ದ್ವಿಚಕ್ರಗಳನ್ನು ವಶಕ್ಕೆ ಪಡೆದಂತಾಗಿದೆ. ಉಳಿದ 3 ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ.
ಈ ಯಶಸ್ವಿ ಮತ್ತು ಭರ್ಜರಿ ಕಾರ್ಯಾಚರಣೆಯಲ್ಲಿ ವೈಟ್ ಫೀಲ್ಡ್ ಉಪ ವಿಭಾಗದ, ಉಪ ಪೊಲೀಸ್ ಆಯುಕ್ತರಾದ ಡಾ|| ಶ್ರೀ. ಶಿವಕುಮಾರ ಐಪಿಎಸ್ ಅವರ ಮಾರ್ಗದರ್ಶನ ಮತ್ತು ವೈಟ್ ಫೀಲ್ಡ್ ಉಪ ವಿಭಾಗದ, ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ರೀನಾ ಸುವರ್ಣರವರ ನೇತೃತ್ವವಿತ್ತು. ಮಹದೇವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಶ್ರೀ.ಪ್ರವೀಣ್ ಬಾಬು, ಜೆಅವರು ಈ ಪ್ರಕರಣದ ಪ್ರಮುಖ ಪಾತ್ರವಹಿಸಿದ್ದರು.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









