ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸುಕಂದಕಟ್ಟೆಯ ವಾಸಿಯಾದ ಪಿರಾದುದಾರರು ದಿನಾಂಕ:03/08/2024 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:26/07/2024 ರಂದು ದ್ವಿ-ಚಕ್ರ ವಾಹನವನ್ನು ಮನೆಯ ಮುಂಭಾಗದಲ್ಲಿ ನಿಲ್ಲಿಸಿ ಸ್ವಂತ ಊರಾದ ಚನ್ನಪಟ್ಟಣಕ್ಕೆ ಹೋಗಿರುತ್ತಾರೆ. ದಿನಾಂಕ:02/08/2024 ರಂದು ರಾತ್ರಿ ವಾಪಸ್ ಮನೆಗೆ ಬಂದು ನೋಡಲಾಗಿ, ಪಿರಾದುದಾರರ ದ್ವಿ-ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ದಿನಾಂಕ:08/10/2024 ರಂದು ಠಾಣಾ ಸರಹದ್ದಿನ ಪೈಪ್‌ಲೈನ್ ರಸ್ತೆ, ವಾಟರ್‌ಟ್ಯಾಂಕ್ ಬಳಿ ಠಾಣೆಯ ಸಿಬ್ಬಂದಿಗಳು ವಿಶೇಷ ವಾಹನ ತಪಾಸಣೆ ಮಾಡುತ್ತಿದ್ದಾಗ, ಪ್ರಕರಣದಲ್ಲಿ ಕಳುವಾಗಿದ್ದ ದ್ವಿ-ಚಕ್ರ ವಾಹನ ಸಮೇತ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಹಾಗೂ ಆತನ ಬಳಿಯಿದ್ದ 4 ಮೊಬೈಲ್ ಫೋನ್‌ಗಳ ಬಗ್ಗೆ ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ದ್ವಿ-ಚಕ್ರ ವಾಹನವನ್ನು ಮತ್ತು ನಗರದ ವಿವಿಧ ಕಡೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿರುವುದಾಗಿ ತಪ್‌ಪ್ಪಿಕೊಂಡಿರುತ್ತಾನೆ ಮತ್ತು ಈ ಪ್ರಕರಣದಲ್ಲಿ ಮತ್ತೋರ್ವ ಸಹಚರನು ಸಹ ಭಾಗಿಯಾಗಿರುತ್ತಾನೆಂದು ತಿಳಿಸಿರುತ್ತಾನೆ.
ಆರೋಪಿಯು ನಗರದ ವಿವಿಧ ಕಡೆಗಳಲ್ಲಿ ಕಳವು ಮಾಡಿದ್ದ ಮೊಬೈಲ್ ಫೋನ್‌ಗಳನ್ನು ಹೆಗ್ಗಡದೇವನಪುರ, ದಾಸನಪುರ ಹೋಬಳಿಯಲ್ಲಿ ಆತನು ವಾಸವಿರುವ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದು, ಅದೇ ದಿನ 16 ಮೊಬೈಲ್ ಫೋನ್‌ಗಳನ್ನು ಆತನ ಮನೆಯಿಂದ ವಶಪಡಿಸಿಕೊಳ್ಳಲಾಯಿತು.
ದಿನಾಂಕ:09/10/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ತನಿಖೆಯನ್ನು ಮುಂದುವರೆಸಿ, ಆರೋಪಿಯು ನೀಡಿದ್ದ ಮಾಹಿತಿ ಮೇರೆಗೆ ದಿನಾಂಕ:16/10/2024 ರಂದು ಸುಮ್ಮನಹಳ್ಳಿ ಜಂಕ್ಷನ್ ಬಳಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹಾಗೂ ನಗರದ ವಿವಿಧ ಕಡೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಆತನ ಅಂಗಶೋಧನೆ ಮಾಡಲಾಗಿ ಆತನ ಬಳಿ 5 ಮೊಬೈಲ್ ಫೋನ್‌ಗಳಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ದಿನಾಂಕ:16/10/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 8 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದುಕೊಂಡ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ನಗರದ ವಿವಿಧ ಕಡೆಗಳಲ್ಲಿ ಕಳವು ಮಾಡಿದ್ದ ಮೊಬೈಲ್ ಫೋನ್‌ಗಳನ್ನು ಹೆಗ್ಗಡದೇವನಪುರ, ದಾಸನಪುರ ಹೋಬಳಿಯಲ್ಲಿ ಆತನು ವಾಸವಿರುವ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದು, ದಿನಾಂಕ:18/10/2024 ರಂದು ಆತನ ವಾಸದ ಮನೆಯಿಂದ 13 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಗಳ ವಶದಿಂದ ಒಟ್ಟಾರೆಯಾಗಿ 1-ದ್ವಿ-ಚಕ್ರ ವಾಹನ ಮತ್ತು 38 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 6,60,000/-(ಆರು ಲಕ್ಷದ ಆರವತ್ತು ಸಾವಿರ ರೂಪಾಯಿ).
ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಪ್ರಕರಣದ ಆರೋಪಿಗಳ ಬಂಧನದಿಂದ ಇಲಾಸ್ಟ್‌ನಲ್ಲಿ ವರದಿಯಾಗಿದ್ದ 7 ಮೊಬೈಲ್ ಕಳವು ಪ್ರಕರಣಗಳಲ್ಲಿ ಸಂಬಂಧಪಟ್ಟ ಮಾಲೀಕರುಗಳಿಗೆ 7 ಮೊಬೈಲ್ ಫೋನ್‌ಗಳನ್ನು ವಿಲೇವಾರಿ ಮಾಡಲಾಗಿರುತ್ತದೆ. ಉಳಿದ 31 ಮೊಬೈಲ್ ಫೋನ್‌ಗಳ ಮಾಲೀಕರುಗಳ ಪತ್ತೆ ಕಾರ್ಯ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್.ಎಸ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ವಿಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಚಂದನ್ ಕುಮಾರ್, ಎನ್ ರವರ ನೇತೃತ್ವದಲ್ಲಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ನಾಗೇಶ್.ಜಿ.ಎನ್ ರವರ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









