11 ದ್ವಿ-ಚಕ್ರ ವಾಹನ, 25 ಮೊಬೈಲ್ ಫೋನ್ ಮತ್ತು 21 ಗ್ರಾಂ ಚಿನ್ನಾಭರಣ ವತ ಮೌಲ್ಯ 14 ಲಕ್ಷ
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ಸರಹದ್ದಿನ ದೊಡ್ಡತೋಗೂರಿನಲ್ಲಿ ವಾಸವಿರುವ ಪಿರಾದುದಾರರು, ದಿನಾಂಕ:07/10/2024 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:01/09/2024 ರಂದು ಸಂಜೆ ಕೋನಪ್ಪನ ಅಗ್ರಹಾರದ ಕಾವೇರಿ ಆಸ್ಪತ್ರೆ ಹಿಂಭಾಗದಲ್ಲಿರುವ ಬಾರ್‌ವೊಂದರ ಮುಂಭಾಗದಲ್ಲಿ ದ್ವಿ-ಚಕ್ರ ವಾಹನವನ್ನು ನಿಲ್ಲಿಸಿ ಬಾರ್ ಒಳಗೆ ಹೋಗಿರುತ್ತಾರೆ. ಪಿರಾದುದಾರರು ಮಧ್ಯವನ್ನು ಖರೀದಿ ಮಾಡಿಕೊಂಡು ವಾಪಸ್ ಬಂದು ನೋಡಲಾಗಿ ಪಿರಾದುದಾರರ ದ್ವಿ-ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳುವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:01/11/2024 ರಂದು ದೊಡ್ಡ ತೋಗೂರಿನ ಎಂ.ಎಂ.ಸ್ಕೂಲ್ ಬಳಿ ಇಬ್ಬರು ವ್ಯಕ್ತಿಗಳನ್ನು ಈ ಪ್ರಕರಣದಲ್ಲಿ ಕಳುವಾಗಿದ್ದ ದ್ವಿ-ಚಕ್ರ ವಾಹನ ಹಾಗೂ 2 ಮೊಬೈಲ್ ಫೋನ್ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ದ್ವಿ-ಚಕ್ರ ವಾಹನವನ್ನು ಹಾಗೂ ಬೆಂಗಳೂರು ನಗರದ ವಿವಿದ ಕಡೆಗಳಲ್ಲಿ ದ್ವಿ-ಚಕ್ರ ವಾಹನ ಮತ್ತು ಮೊಬೈಲ್ ಫೋನ್ ಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ.
ದಿನಾಂಕ:02/11/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 5 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ವಿಚಾರಣೆಗೊಳಪಡಿಸಲಾಗಿ, ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ಬೆಂಗಳೂರು ನಗರದ ವಿವಿದ ಕಡೆಗಳಲ್ಲಿ ಕಳವು ಮಾಡಿದ್ದ ದ್ವಿ-ಚಕ್ರ ವಾಹನಗಳನ್ನು ಹಾಗೂ ಮೊಬೈಲ್ ಫೋನ್‌ಗಳನ್ನು, ನಗರದ ವಿವಿದ ಕಡೆಗಳಲ್ಲಿ ಇಟ್ಟಿರುವುದಾಗಿ ತಿಳಿಸಿರುತ್ತಾರೆ.
ದಿನಾಂಕ:03/11/2024 ರಂದು ಜಕ್ಕಸಂದ್ರದಲ್ಲಿರುವ ರಾಷ್ಟ್ರಕವಿ ಕುವೆಂಪು ಪಾರ್ಕ್‌ನ ಖಾಲಿ ಜಾಗದಲ್ಲಿ ಕಳವು ಮಾಡಿ ನಿಲ್ಲಿಸಿದ್ದ 6 ದ್ವಿ-ಚಕ್ರ ವಾಹನಗಳನ್ನು, ಹಾಗೂ ಆರೋಪಿಗಳಿಬ್ಬರು ಸಲಾಡ್ ಡೇಸ್ ಕಿಚನ್ ಹೊಟೇಲ್ ಬಿಲ್ಡಿಂಗ್, ಹೆಚ್.ಎಸ್.ಆರ್ ಲೇಔಟ್‌ನಲ್ಲಿ ವಾಸವಿರುವ ರೂಂ ನಿಂದ 10 ಮೊಬೈಲ್ ಫೋನ್‌ಗಳು, 21 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:04/11/2024 ರಂದು ಚಿಕ್ಕ ತೋಗೂರು ಬ್ರಿಡ್ಜ್ ಬಳಿ ಕಳವು ಮಾಡಿ ನಿಲ್ಲಿಸಿದ್ದ, 4 ದ್ವಿ-ಚಕ್ರ ವಾಹನಗಳನ್ನು ಹಾಗೂ ಬಂಡೇಪಾಳ್ಯ ಪೊಲೀಸ್ ಠಾಣಾ ಸರಹದ್ದಿನ ಮಂಗಮ್ಮನಪಾಳ್ಯದಲ್ಲಿರುವ ಮೊಬೈಲ್ ಅಂಗಡಿಗೆ ಮಾರಾಟ ಮಾಡಿದ್ದ 13 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಗಳ ಬಂದನದಿಂದ ಒಟ್ಟಾರೆ 11 ದ್ವಿ-ಚಕ್ರ ವಾಹನಗಳು, 25 ಮೊಬೈಲ್ ಫೋನ್‌ಗಳು ಹಾಗೂ 21 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 11.50.000/-(ಹನ್ನೊಂದು ಲಕ್ಷದ ಐವತ್ತು ಸಾವಿರ ರೂಪಾಯಿ).
ಈ ಪ್ರಕರಣದ ಆರೋಪಿಗಳ ಬಂದನದಿಂದ 1) ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ 2) ತಿಲಕನಗರ ಪೊಲೀಸ್ ಠಾಣೆಯ- ದ್ವಿ-ಚಕ್ರ ವಾಹನ ಕಳವು ಪ್ರಕರಣ 3) ಸರ್ಜಾಪುರ ಪೊಲೀಸ್ ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 3 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. 7 ದ್ವಿ-ಚಕ್ರ ವಾಹನಗಳು ಮತ್ತು 23 ಮೊಬೈಲ್ ಫೋನ್‌ಗಳ ವಾರಸುದಾರರ ಪತ್ತೆಕಾರ್ಯ ಮುಂದುವರೆದಿದೆ.
ದಿನಾಂಕ:06/11/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಚರಣೆಯನ್ನು ಆಗ್ನೆಯ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀಮತಿ ಸಾರಾ ಫಾತಿಮಾ ರವರ ಮಾರ್ಗ ದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಸತೀಶ ಕೆ ಎಮ್ ರವರ ನೇತೃತ್ವದಲ್ಲಿ ಶ್ರೀ ನವೀನ್ ಜಿ.ಎಂ ಪೊಲೀಸ್ ಇನ್ಸ್ಪೆಕ್ಟರ್ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









