ಅಂಗಡಿಯಲ್ಲಿ ಚೌಕಾಸಿ ಮಾಡಿದ್ದಕ್ಕೆ ಆಕ್ರೋಶಗೊಂಡ ಅಂಗಡಿ ಮಾಲೀಕ ಕತ್ತರಿಯಿಂದ ಗ್ರಾಹಕನಿಗೆ ಚುಚ್ಚಿದ್ದಾನೆ. ಮೈಸೂರು ಜಿಲ್ಲೆ ಹಣಸೂರು ಬೈಪಾಸ್ ರಸ್ತೆ ಬಳಿ ಈ ಘಟನೆ ನಡೆದಿದೆ.
ಈ ಬಗ್ಗೆ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕುಶಾಲನಗರ ಬಳಿ ಬೈಚನಹಳ್ಳಿ ಗ್ರಾಮದ ನಂದೀಶ್ ಕತ್ತರಿ ಚುಚ್ಚಿದ್ದರಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮುರುಗೇಶ್ ಜೋಗಿ ಮಾರ್ಕೆಟಿಂಗ್ ಮಾಲೀಕ ಮುರುಗೇಶ್ ಜೋಗಿ ಹಾಗೂ ಇತರ ಇಬ್ಬರ ವಿರುದ್ಧ ಹುಣಸೂರು ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಮುರುಗೇಶ್ ಜೋಗಿ ಮಾರ್ಕೆಟಿಂಗ್‌ನಲ್ಲಿ ತಮ್ಮ ಗೂಡ್ಸ್ ವಾಹನಕ್ಕೆ ಮ್ಯಾಟ್ ಖರೀದಿಸಲು ನಂದೀಶ್ ಹೋಗಿದ್ದರು.
ಈ ವೇಳೆ ಮುರುಗೇಶ್ ಜೋಗಿ ಮ್ಯಾಟ್ ಬೆಲೆ 2300 ರೂಪಾಯಿ ಎಂದು ಹೇಳಿದ್ದಾರೆ.ಆದ್ರೆ ನಂದೀಶ್ 2000 ರೂಪಾಯಿಗೆ ಕೊಡುವಂತೆ ಕೇಳಿದ್ದಾರೆ.ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಅದು ತಾರಕಕ್ಕೇರಿದ್ದು, ಈ ವೇಳೆ ವ್ಯಾಪಾರಿ ಮುರುಗೇಶ್ ಕತ್ತರಿಯನ್ನು ತೆಗೆದುಕೊಂಡು ನಂದೀಶ್‌ಗೆ ಚುಚ್ಚಿದ್ದಾನೆ.
ನಂದೀಶ್ ಅವರು ವ್ಯಾಪಾರಕ್ಕಾಗಿ ತಮ್ಮ ದೊಡ್ಡಮ್ಮನ ಮಗನ ಜೊತೆ ಕುಶಾಲನಗರದಿಂದ ಹುಣಸೂರಿಗೆ ಬಂದಿದ್ದರು. ಇದೇ ವೇಳೆ ಈ ಘಟನೆ ನಡೆದಿದೆ.ನಂದೀಶ್ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.









